ಮಂಗಳೂರು ಸೇರಿದಂತೆ 5 ವಿಮಾನ ನಿಲ್ದಾಣಗಳು ಅದಾನಿ ಗ್ರೂಪ್ ತೆಕ್ಕೆಗೆ
ಖಾಸಗೀಕರಣ ಪ್ರಕ್ರಿಯೆ

ಹೊಸದಿಲ್ಲಿ,ಫೆ.25: ಕೇಂದ್ರ ಸರಕಾರದ ಖಾಸಗೀಕರಣ ಪ್ರಕ್ರಿಯೆಯಲ್ಲಿ ಬಿಡ್‌ಗಳನ್ನು ಕರೆಯಲಾಗಿದ್ದ ಆರು ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ಸೇರಿದಂತೆ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು 50 ವರ್ಷಗಳ ಅವಧಿಗೆ ಅದಾನಿ ಗ್ರೂಪ್ ಪಡೆದುಕೊಂಡಿದೆ.
ಅಹ್ಮದಾಬಾದ್,ತಿರುವನಂತಪುರಂ,ಲಕ್ನೋ,ಮಂಗಳೂರು ಮತ್ತು ಜೈಪುರ ವಿಮಾನ ನಿಲ್ದಾಣಗಳಿಗೆ ಅತ್ಯಂತ ಹೆಚ್ಚಿನ ಬಿಡ್‌ಗಳನ್ನು ಅದಾನಿ ಗ್ರೂಪ್ ಸಲ್ಲಿಸಿದೆ. ಗುವಾಹಟಿ ವಿಮಾನ ನಿಲ್ದಾಣಕ್ಕೆ ಸಲ್ಲಿಕೆಯಾಗಿರುವ ಬಿಡ್‌ಗಳನ್ನು ಮಂಗಳವಾರ ತೆರೆಯಲಾಗುವುದು ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ)ದ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು.
ಬಿಡ್ಡರ್‌ಗಳು ಸಲ್ಲಿಸಿದ್ದ ‘ಪ್ರತಿ ಪ್ರಯಾಣಿಕ ಶುಲ್ಕ’ದ ಆಧಾರದಲ್ಲಿ ಬಿಡ್ ವಿಜೇತರನ್ನು ಎಎಐ ಆಯ್ಕೆ ಮಾಡಿದೆ. ಔಪಚಾರಿಕತೆಗಳು ಪೂರ್ಣಗೊಂಡ ನಂತರ ಈ ಐದು ವಿಮಾನ ನಿಲ್ದಾಣಗಳನ್ನು ನಿರ್ವಹಣೆಗಾಗಿ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಗುವುದು ಎಂದರು. ಅದಾನಿ ಗ್ರೂಪ್ ಅಹ್ಮದಾಬಾದ್,ಜೈಪುರ,ಲಕ್ನೋ,ತಿರುವನಂತಪುರಂ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗಾಗಿ ಅನುಕ್ರಮವಾಗಿ 177 ರೂ.,174 ರೂ.,171 ರೂ.,168 ರೂ.ಮತ್ತು 115 ರೂ.ಗಳನ್ನು ಪ್ರತಿ ಪ್ರಯಾಣಿಕ ಶುಲ್ಕವಾಗಿ ನಮೂದಿಸಿತ್ತು. ಇತರರಿಗೆ ಹೋಲಿಸಿದರೆ ಅದು ಅತ್ಯಂತ ಹೆಚ್ಚಿನ ಬಿಡ್ ದರಗಳನ್ನು ಸಲ್ಲಿಸಿತ್ತು ಎಂದು ಅವರು ತಿಳಿಸಿದರು. ಅದಾನಿ ಗ್ರೂಪ್ ಈ ಪ್ರತಿ ಪ್ರಯಾಣಿಕ ಶುಲ್ಕಗಳನ್ನು ಎಎಐಗೆ ಪಾವತಿಸಲಿದೆ.
ದಿಲ್ಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಜಿಎಂಆರ್ ಏರ್‌ಪೋರ್ಟ್ಸ್ ಲಿ.,ನ್ಯಾಷನಲ್ ಇನ್ವೆಸ್ಟಮೆಂಟ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ - ಝುರಿಚ್ ಏರ್‌ಪೋಟ್ ಇಂಟರ್‌ನ್ಯಾಷನಲ್ ಎಜಿ,ಎಎಂಪಿ ಕ್ಯಾಪಿಟಲ್,ಕೇರಳ ರಾಜ್ಯ ಕೈಗಾರಿಕಾಭಿವೃದ್ಧಿ ನಿಗಮ ಸೇರಿದಂತೆ ಒಟ್ಟೂ 10 ಕಂಪನಿಗಳು ಬಿಡ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ಮಂಗಳೂರು ವಿಮಾನ ನಿಲ್ದಾಣಕ್ಕಾಗಿ ಕೋಚಿನ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. ಎರಡನೇ ಅತ್ಯಂತ ಹೆಚ್ಚಿನ ಬಿಡ್ ಮೊತ್ತ(45 ರೂ.)ವನ್ನು ನಮೂದಿಸಿತ್ತು.







