ಇಷ್ಟವಾದ ಜೀವನ ಆಯ್ಕೆ ಮಾಡಿಕೊಳ್ಳಲು ಗೃಹಿಣಿಗೂ ಹಕ್ಕಿದೆ: ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು, ಫೆ.25: ಪ್ರಿಯಕರನೊಂದಿಗೆ ಮನೆಬಿಟ್ಟು ಹೋದ ಅಪ್ರಾಪ್ತೆಯರು ಅಥವಾ ಯುವತಿಯರನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಪೋಷಕರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಮದುವೆಯಾಗಿ ಮೂರು ವರ್ಷದ ಮಗಳನ್ನು ಹೊಂದಿರುವ ಗೃಹಿಣಿಯೊಬ್ಬರು ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿದ್ದ ಪ್ರಕರಣದಲ್ಲಿ ಆಕೆಯ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ‘ತನ್ನ ಮಗಳನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.
ಆದರೆ, ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಗೃಹಿಣಿ, ಸೋಮವಾರ ಹೈಕೋರ್ಟ್‌ಗೆ ಹಾಜರಾಗಿ ತನ್ನ ವಿವಾಹ ನಂತರದ ಪ್ರೇಮ ಪ್ರಸಂಗ ಹಾಗೂ ಪ್ರಿಯಕರನ ಜೊತೆಗಿನ ಎರಡನೇ ಮದುವೆಯ ಕಥೆಯನ್ನು ಬಹಿರಂಗಪಡಿಸಿದರು.
ನಾಪತ್ತೆಯಾಗಿದ್ದ ಗೃಹಿಣಿಯನ್ನು ಪೊಲೀಸರು ಸೋಮವಾರ ಹೈಕೋರ್ಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯವು ಗೃಹಿಣಿಯಿಂದ ಹೇಳಿಕೆ ಪಡೆದುಕೊಂಡಿತು. ‘ಸ್ವಯಂ ಪ್ರೇರಿತಳಾಗಿ ನಾನು ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿದ್ದೇನೆ. ಆತನನ್ನು ಈಗಾಗಲೇ ನಾನು ಮದುವೆಯಾಗಿದ್ದೇನೆ. ಆತನೊಂದಿಗೆ ಮುಂದಿನ ಜೀವನ ನಡೆಸುತ್ತೇನೆ. ತಂದೆಯ ಅಥವಾ ಗಂಡನ ಮನೆಗೆ ಹೋಗುವುದಿಲ್ಲ’ ಎಂದು ಆ ಗೃಹಿಣಿ ಸ್ಪಷ್ಟಪಡಿಸಿದರು.
ಇದರಿಂದ ತಂದೆಯ ಪರ ವಕೀಲರು, ‘ಅರ್ಜಿದಾರನ ಮಗಳನ್ನು ಮನೆಯಿಂದ ಕರೆದೊಯ್ದ ಯುವಕನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಅನುಮತಿ ನೀಡಬೇಕು’ ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ‘ಗೃಹಿಣಿಯು ತನ್ನ ಇಚ್ಛೆಯೊಂದಿಗೆ ಯುವಕನೊಂದಿಗೆ ಮನೆಬಿಟ್ಟು ಹೋಗಿದ್ದಾಳೆ. ಆ ಯುವಕನನ್ನು ಈಗಾಗಲೇ ಮದುವೆಯಾಗಿದ್ದು, ಮುಂದಿನ ಜೀವನ ಆತನೊಂದಿಗೆ ನಡೆಸಲು ಬಯಸಿದ್ದಾಳೆ. ಇಷ್ಟವಾದ ಜೀವನ ಆಯ್ಕೆ ಮಾಡಿಕೊಳ್ಳಲು ಆಕೆ ಹಕ್ಕು ಹೊಂದಿದ್ದಾಳೆ. ಹೀಗಾಗಿ, ಪ್ರಕರಣದಲ್ಲಿ ಅಪಹರಣ ಹಾಗೂ ಅಕ್ರಮ ಬಂಧನವಾಗಿರುವುದು ಕಂಡುಬಂದಿಲ್ಲ’ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.
ಈ ಮಧ್ಯೆ ಯುವಕನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಗೃಹಿಣಿಯ ತಂದೆಗೆ ಅನುಮತಿ ನೀಡಲು ಹೈಕೋರ್ಟ್ ಮೌಖಿಕವಾಗಿ ನಿರಾಕರಿಸಿತು. ಕ್ರಿಮಿನಲ್ ಕೇಸು ದಾಖಲಿಸುವುದು ಅರ್ಜಿದಾರರಿಗೆ ಬಿಟ್ಟ ವಿಚಾರ. ಅದಕ್ಕಾಗಿ ಅನುಮತಿ ನೀಡುವ ಅಗತ್ಯ ಉದ್ಭವಿಸುವುದಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು. ‘ತನ್ನ ಪುತ್ರಿ 2012ರಲ್ಲಿಯೇ ಮದುವೆಯಾಗಿದ್ದಳು. ಅಳಿಯ ಸದ್ಯ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಮೂರು ವರ್ಷದ ಹೆಣ್ಣು ಮಗಳು ಇದ್ದಾಳೆ. ಈ ಮಧ್ಯೆ ಮಗಳನ್ನು ಯುವಕನೋರ್ವ 2019ರ ಫೆ.9ರಂದು ಮನೆಯಿಂದ ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಎಫ್‌ಐಆರ್ ದಾಖಲಿಸಿರುವ ಪೊಲೀಸರು, ತನ್ನ ಮಗಳ ಪತ್ತೆಗೆ ಮಾತ್ರ ಕ್ರಮ ಜರುಗಿಸುತ್ತಿಲ್ಲ’ ಎಂದು ತಂದೆಯು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಅಹವಾಲು ತೋಡಿಕೊಂಡಿದ್ದರು.







