ತುಮಕೂರು ವಿವಿ 12ನೇ ಘಟಿಕೋತ್ಸವ: 68 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ತುಮಕೂರು,ಫೆ.25: ಫೆಬ್ರವರಿ 27ರಂದು ನಡೆಯಲಿರುವ ತುಮಕೂರು ವಿವಿಯ 12ನೇ ಘಟಿಕೋತ್ಸವದಲ್ಲಿ 68 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ ಹಾಗೂ 3 ನಗದು ಬಹುಮಾನವನ್ನು ನೀಡಲಾಗುತ್ತಿದ್ದು, ಒಟ್ಟು 9442 ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಬಾರೀಯ ಘಟಿಕೋತ್ಸವದಲ್ಲಿ ಒಟ್ಟು 67 ಅಭ್ಯರ್ಥಿಗಳಿಗೆ ಪಿಎಚ್‍ಡಿ ಪ್ರದಾನ ಮಾಡುತ್ತಿದ್ದು, ಓರ್ವ ಅಭ್ಯರ್ಥಿಗೆ ಡಿ.ಲಿಟ್ ಪದವಿ ದೊರಕಿದ್ದು, ಎಂಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗಕ್ಕೆ 2, ಎಂಎಸ್ಸಿ ಸಂವಹನ ವಿಭಾಗಕ್ಕೆ 3 ರ್‍ಯಾಂಕ್ ನೀಡಲಾಗಿದೆ. ಇನ್ನುಳಿದ ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್‍ಯಾಂಕ್ ಗಳನ್ನು ನೀಡಲಾಗಿದೆ. ಬಿಎ, ಬಿಎಸ್‍ಡಬ್ಲ್ಯು, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಇಡಿ( ಸೆಮಿಸ್ಟರ್ ಪದ್ಧತಿ) ಗಳಿಗೆ ತಲಾ ಹತ್ತು ರ್‍ಯಾಂಕ್ ಗಳನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯವು ಎಂ.ಎಸ್ಸಿ ಮನೋವಿಜ್ಞಾನ, ಎಂ.ಎಸ್ಸಿ ಸಾವಯವ ರಸಾಯನಶಾಸ್ತ್ರ, ಎಂ.ಎಸ್ಸಿ ಜೈವಿಕ ತಂತ್ರಜ್ಞಾನ, ಎಂ.ಎ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂ.ಸಿ.ಜೆ) ಹಾಗೂ ಎಂ.ಸಿ.ಎ, ಕೋರ್ಸ್‍ಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಈ ಹೊಸ ಕೋರ್ಸ್‍ಗಳೊಂದಿಗೆ ಸಮಾಜ ಕಾರ್ಯ ವಿಭಾಗ (ಬಿಎಸ್‍ಡಬ್ಲ್ಯೂ), ಬಿಸಿಎ, ಬಿವಿಎ, ಎಂಪಿಇಡಿ, ತೆಂಗುಕೃಷಿ, ಪರಿಸರ ಪರಿಣಾಮ ಮೌಲ್ಯಮಾಪನ ಮತ್ತು ಸುರಕ್ಷಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‍ಗಳನ್ನು ಆರಂಭಿಸುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ ಎಂದು ತಿಳಿಸಿದರು.
ಆಧುನೀಕರಣಕ್ಕೆ ಒತ್ತು: ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪ್ರತಿ ವಿಭಾಗದಲ್ಲಿ ಮಿನಿ ಕಂಪ್ಯೂಟರ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದರ ಜೊತೆಗೆ ತರಗತಿ ಕೊಠಡಿಗಳಲ್ಲಿ ಹೊಸ ಎಲ್.ಸಿ.ಡಿ ಪರದೆ ಅಳವಡಿಸಿ ಆಧುನೀಕರಿಸಲಾಗಿದೆ. ಯುಜಿಸಿ, ಡಿಎಸ್‍ಟಿ ಸೇರಿದಂತೆ ಪ್ರತಿಷ್ಠಿತ ಅನುದಾನ ಸಂಸ್ಥೆಗಳಿಂದ ವಿವಿಗೆ ಅನುದಾನ ಲಭಿಸುತ್ತಿದ್ದು, ಸಂಶೋಧನೆಗೆ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮುಂದಿನ ವರ್ಷ ಹೊಸ ಕ್ಯಾಂಪಸ್‍ನಲ್ಲಿ ತರಗತಿ: ಬಿದರಕಟ್ಟೆ ಕಾವಲ್‍ನಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಕಾರ್ಯ ಚುರುಕು ಗೊಳಿಸಲಾಗುತ್ತಿದೆ. ಕ್ಯಾಂಪಸ್‍ಗೆ ಡಾಂಬರು ಹಾಕುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪ್ರಾರಂಭಿಸಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಒಂದಿಷ್ಟು ಕೋರ್ಸ್‍ಗಳನ್ನು ಅಲ್ಲಿ ಪ್ರಾರಂಭಿಸುವ ಗುರಿ ಹೊಂದಿದ್ದೇವೆ ಎಂದು ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
130 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 80 ಕೋಟಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಆಗಿದೆ. ಸರ್ಕಾರದಿಂದ ಮಂಜೂರಾದ ಅನುದಾನ ಹಾಗೂ ವಿವಿಯ ಆಂತರಿಕ ಸಂಪನ್ಮೂಲದಿಂದ ಕಾಮಗಾರಿ ನಡೆಸಲಾಗುವುದು. ಸರ್ಕಾರದ ಆದೇಶದನ್ವಯ ರೈಟ್ಸ್ ಲಿಮಿಟೆಡ್ ಸಂಸ್ಥೆಯು ಕ್ಯಾಂಪಸ್ ನಿರ್ಮಾಣ ಕಾಮಗಾರಿ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಿರಾದಲ್ಲಿ ವಿವಿಯ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ 25 ಎಕರೆ ಜಾಗ ವಿವಿಗೆ ಸಿಕ್ಕಿದೆ. ಸರ್ಕಾರವು 10 ಕೋಟಿ ಮಂಜೂರು ಮಾಡಿದ್ದು, ಈಗಾಗಲೇ 3 ಕೋಟಿ ಬಿಡುಗಡೆ ಮಾಡಿದೆ. ವಿಸ್ತೃತ ಯೋಜನೆ ಮತ್ತು ಆಯವ್ಯಯವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ಕ್ಯಾಂಪಸ್ ಜೊತೆಗೆ ಈಗಿರುವ ಕ್ಯಾಂಪಸ್ ಆಧುನೀಕರಣಕ್ಕೆ, ಸೌರ ವಿದ್ಯುತ್ ಬಳಕೆ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ವಿವಿ ಕೈಗೊಂಡಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿದ್ದು, ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಯನ್ನು ಜಾರಿಗೆ ತಂದ ಮೊದಲ ವಿವಿ ನಮ್ಮದೇ ಎಂದು ಹೇಳಿದರು.
ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯ್ಕ, ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಕೆ.ಜೆ.ಸುರೇಶ್ ಗೋಷ್ಠಿಯಲ್ಲಿದ್ದರು.







