ಅಲ್ಪಸಂಖ್ಯಾತರ ಪ್ರಗತಿಗೆ ಸರ್ಕಾರಗಳು ಪೂರಕ ವಾತಾವರಣ ನಿರ್ಮಿಸಿಕೊಡಬೇಕು: ಎ ಪಿ ಅಬೂಬಕರ್ ಮುಸ್ಲಿಯಾರ್
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನ ಸಮಾಪ್ತಿ

ಹೊಸದಿಲ್ಲಿ, ಫೆ. 25: ಭಾರತದ ಸಂವಿಧಾನವು ಬಹುಸಂಖ್ಯಾತ- ಅಲ್ಪಸಂಖ್ಯಾತ ವ್ಯತ್ಯಾಸವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಆದರೆ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿಯುವ ಮೂಲಕ ಹಕ್ಕುಗಳನ್ನು ಅನುಭವಿಸುವುದರಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾಭ್ಯಾಸದಲ್ಲಿ ಮುಂದುವರಿಯುವ ಮೂಲಕ ಪ್ರಗತಿ ಸಾಧಿಸಲು ಸಮುದಾಯ ಪ್ರಯತ್ನಿಸುವುದರೊಂದಿಗೆ ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸರ್ಕಾರಗಳು ನಿರ್ಮಿಸಿ ಕೊಡಬೇಕು ಎಂದು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮ್ಮೇಳನ ಸಮಾರೋಪವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯ ನಾಯಕ ಸೈಯದ್ ಜಾವೇದ್ ಮನ್ನಾನ್ ಮಿಯಾ ಹಝ್ರತ್ ಬರೇಲ್ವಿ ಸಮ್ಮೇಳನ ಉದ್ಘಾಟಿಸಿದರು. ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ, ಡಾ. ಹುಸೈನ್ ಸಖಾಫಿ, ಡಾ ಎಪಿ ಅಬ್ದುಲ್ ಹಕೀಂ ಅಝ್ಹರಿ, ಡಾ. ಫಾರೂಖ್ ನಯಿಮಿ ಮೊದಲಾದವರು ಮಾತನಾಡಿದರು.
ಎಸ್ಸೆಸ್ಸೆಫ್ ದ್ವಿದಿನ ರಾಷ್ಟ್ರೀಯ ಸಮ್ಮೇಳನವನ್ನು ಜೊಧಪುರ ವಿಶ್ವವಿದ್ಯಾಲಯದ ಕುಲಪತಿ ಡಾ. ಅಖ್ತರ್ ವಾಸಿ ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶೌಕತ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಖಲೀಫಾಯೆ ತಾಜುಶ್ಶರೀಅ ಡಾ. ಮುಹಮ್ಮದ್ ಫಾಝಿಲ್ ಹಝ್ರತ್, ಐಸಿಎಫ್ ಕುವೈತ್ ರಾಷ್ಟ್ರೀಯ ನಾಯಕ ಅಬ್ದುಲ್ಲಾ ವಡಗರ, ಸುಹೈರುದ್ದೀನ್ ನೂರಾನಿ ಬಂಗಾಳ್ ಮೊದಲಾದವರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.
ಎಸ್ಸೆಸ್ಸಫ್ ರಾಷ್ಟ್ರೀಯ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಕ್ಯಾಂಪಸ್ ಕಾರ್ಯದರ್ಶಿ ಸೈಯದ್ ಸಾಜಿದ್ ಬುಖಾರಿ ಕಾಶ್ಮೀರ ವಂದಿಸಿದರು.
ರಾಜ್ ಘಾಟ್ ನಿಂದ ರಾಮಲೀಲಾ ಮೈದಾನದವರೆಗೆ ಬೃಹತ್ ವಿದ್ಯಾರ್ಥಿ ಜಾಥಾ ನಡೆಯಿತು.











