ಭದ್ರತಾ ಪಡೆಗಳ ಮಾನವ ಹಕ್ಕುಗಳ ರಕ್ಷಣೆ ಕೋರಿ ಸಲ್ಲಿಸಿದ ಮನವಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹೊಸದಿಲ್ಲಿ ಫೆ. 25: ಕರ್ತವ್ಯ ನಿರ್ವಹಿಸುತ್ತಿರುವಾಗ ದಾಳಿಗೆ ಒಳಗಾಗುವ ಭದ್ರತಾ ಪಡೆ ಸಿಬ್ಬಂದಿಯ ಮಾನವ ಹಕ್ಕುಗಳ ರಕ್ಷಣೆ ಕೋರಿ ಸಲ್ಲಿಸಿದ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.
19 ವರ್ಷದ ಪ್ರೀತಿ ಕೇದಾರ್ ಗೋಖಲೆ ಹಾಗೂ 20 ವರ್ಷದ ಕಾಜಾ ಮಿಶ್ರಾ ಅವರು ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಸಂಜೀವ್ ಕುಮಾರ್ ಅವರನ್ನು ಒಳಗೊಂಡ ಪೀಠ ಕೇಂದ್ರ ಸರಕಾರ, ರಕ್ಷಣಾ ಸಚಿವಾಲಯ, ಜಮ್ಮು ಕಾಶ್ಮೀರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸು ಜಾರಿ ಮಾಡಿದೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಯೋಧರು ಹಾಗೂ ಯೋಧರ ವಾಹನಗಳ ಮೇಲೆ ಕಲ್ಲೆಸೆಯುವ ಅಶಿಸ್ತಿನ ಹಾಗೂ ವಿಚ್ಛಿದ್ರಕಾರಿ ಘಟನೆಯಿಂದ ತುಂಬಾ ಕಳವಳಕೊಂಡಿದ್ದೇವೆ ಎಂದು ದೂರುದಾರರು ಹೇಳಿದ್ದಾರೆ.
ಕರ್ತವ್ಯ ನಿರ್ವಹಣೆ ಸಂದರ್ಭ ದಾಳಿಗೆ ಒಳಗಾಗುವ ಭದ್ರತಾ ಪಡೆಗಳ ಸಿಬ್ಬಂದಿಯ ಮಾನವ ಹಕ್ಕುಗಳ ಉಲ್ಲಂಘನೆ ನಿಗ್ರಹಿಸಲು ನೀತಿ ರೂಪಿಸುವಂತೆ ಮನವಿ ಕೋರಿದೆ. ‘‘ನಿಯೋಜಿತ ಪ್ರದೇಶದಲ್ಲಿ ಶಾಂತಿ ಹಾಗೂ ಭದ್ರತೆ ಕಾಪಾಡಲು ಕರ್ತವ್ಯ ನಿರ್ವಹಿಸುವ ಸಂದರ್ಭ ಕಲ್ಲು ತೂರಾಟಗಾರರಿಂದ ಭಾರತೀಯ ಸೇನೆಯ ಪಡೆ ತೊಂದರೆಗೆ ಒಳಗಾಗುತ್ತಿದ್ದಾರೆ’’ ಎಂದು ದೂರುದಾರರು ಕಳವಳ ವ್ಯಕ್ತಪಡಿಸಿದ್ದಾರೆ.
ಇಬ್ಬರು ದೂರುದಾರರು ಸೇನಾಧಿಕಾರಿಗಳ ಪುತ್ರಿಯರು. ಒಬ್ಬರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಪುತ್ರಿ. ಇನ್ನೊಬ್ಬರು ನಿವೃತ್ತ ಸೇನಾಧಿಕಾರಿಯ ಪುತ್ರಿ.







