ಗಂಗಾನದಿಯಲ್ಲಿ ಮುಳುಗಿದರೆ ಪಾಪ ನಾಶವಾಗುವುದೇ: ಮೋದಿಗೆ ಮಾಯಾವತಿ ಪ್ರಶ್ನೆ

ಹೊಸದಿಲ್ಲಿ,ಫೆ.25: ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳು, ವಿಶ್ವಾಸಘಾತ ಮತ್ತು ಇತರ ಅನಾಚಾರಗಳ ಪಾಪ ನಾಶವಾಗುವುದೇ ಎಂದು ಬಹುಜನಸಮಾಜ ಪಕ್ಷದ ನಾಯಕಿ ಮಾಯಾವತಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಕುಂಭ ಮೇಳದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಶಾಹಿಸ್ನಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ತೀಕ್ಷ್ಣ ಹೇಳಿಕೆಯನ್ನು ನೀಡಿದ್ದಾರೆ. ಮೂರು ನದಿಗಳ ಸಂಗಮ ಸ್ಥಳದಲ್ಲಿ ಶಾಹಿ ಸ್ನಾನ ಮಾಡಿದರೆ ಜೀವನದ ಪಾಪಗಳೆಲ್ಲ ಕಳೆಯುತ್ತವೆ ಎಂಬ ನಂಬಿಕೆಯಿದೆ. ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ, ನೋಟುರದ್ದತಿ, ಜಿಎಸ್‌ಟಿ, ಪ್ರತೀಕಾರ, ಜಾತಿವಾದ, ಕೋಮುವಾದ ಮತ್ತು ಸರ್ವಾಧಿಕಾರಿ ಧೋರಣೆಯಿಂದ ತಮ್ಮ ಜೀವನವನ್ನು ದುಸ್ಥರಗೊಳಿಸಿರುವ ಬಿಜೆಪಿಯನ್ನು ಜನರು ಸುಲಭವಾಗಿ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೋದಿಯ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಟೀಕಿಸಿದ ಮಾಯಾವತಿ, ತಿಂಗಳಿಗೆ 500ರೂ. ನೀಡುವುದರಿಂದ ಕಾರ್ಮಿಕರಿಗೆ ಸಹಾಯವಾಗಬಹುದು. ರೈತರಿಗೆ ಈ ಯೋಜನೆಯಿಂದ ಪ್ರಯೋಜನವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.





