ಪುಲ್ವಾಮ ದಾಳಿ ಬಗ್ಗೆ ಕೇಂದ್ರ, ಮೋದಿಗೆ ಮೊದಲೇ ಮಾಹಿತಿ ಇತ್ತು: ಮಮತಾ ಬ್ಯಾನರ್ಜಿ

ಕೋಲ್ಕತಾ, ಫೆ. 25: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಿಆರ್‌ಪಿಎಫ್‌ನ ಹುತಾತ್ಮ ಯೋಧರ ರಕ್ತದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಪೂರ್ವ ಮಾಹಿತಿ ಇತ್ತು ಎಂದಿದ್ದಾರೆ.
“ಸಿಆರ್‌ಪಿಎಫ್‌ನ 2,500 ಯೋಧರನ್ನು ಏರ್‌ಲಿಫ್ಟ್ ಮಾಡಿಲ್ಲ ಯಾಕೆ ?, ಸಾಗುವ ರಸ್ತೆಯಲ್ಲಿ ತಪಾಸಣೆ ನಡೆಸದೆ, ಭದ್ರತೆ ಏರ್ಪಡಿಸದೆ ಸಿಆರ್‌ಪಿಎಫ್‌ನ ವಾಹನ ವ್ಯೆಹಕ್ಕೆ ಸಂಚರಿಸಲು ಅವಕಾಶ ನೀಡಿರುವುದು ಯಾಕೆ ?” ಎಂದು ಅವರು ಪ್ರಶ್ನಿಸಿದ್ದಾರೆ.
“ಪುಲ್ವಾಮ ಭಯೋತ್ಪಾದಕ ದಾಳಿ ನಡೆದ ಸಂದರ್ಭ ಮೋದಿ, ಬಾಬು ಎಲ್ಲಿದ್ದರು ?, ದಾಳಿ ನಡೆಯುವ ಮೊದಲೇ ನಿಮಗೆ ಗೊತ್ತಿತ್ತು. ನಿಮಗೆ ಮೊದಲೇ ಮಾಹಿತಿ ಇತ್ತು.’’ ಎಂದು ಇಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅವರು ಹೇಳಿದರು.
‘‘ಭಯೋತ್ಪಾದಕ ದಾಳಿಯ ಬಗ್ಗೆ ಬೇಹುಗಾರಿಕೆ ಸಂಸ್ಥೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿತ್ತು. ಆದರೂ, ಯೋಧರನ್ನು ಏರ್‌ಲಿಫ್ಟ್ ಮಾಡಿಲ್ಲ ಯಾಕೆ ?, ಯೋಧರ ವಾಹನ ವ್ಯೂಹ ಸಾಗುವ ರಸ್ತೆಯಲ್ಲಿ ಭದ್ರತೆ, ತಪಾಸಣೆ ನಡೆಸಿಲ್ಲ ಯಾಕೆ ?’’ ಎಂದು ಅವರು ಪ್ರಶ್ನಿಸಿದರು.
‘‘ಸೈನಿಕರು ಸಾಯುವುದಕ್ಕಾಗಿ ಹೋದರೆ ? ಯಾಕೆಂದರೆ ಚುನಾವಣೆಯ ಮುನ್ನ ಇದನ್ನು ರಾಜಕೀಯಗೊಳಿಸಲು ನೀವು ಬಯಸಿದ್ದೀರಿ. ನಮ್ಮ ಯೋಧರ ರಕ್ತವನ್ನು ಈ ರೀತಿ ರಾಜಕೀಯಗೊಳಿಸಬಾರದು’’ ಎಂದು ಬ್ಯಾನರ್ಜಿ ಹೇಳಿದರು.
ಮೋದಿ ಅವರು ಶಾಂತಿದೂತನಂತೆ ನಟಿಸುತ್ತಿದ್ದಾರೆ. ಆದರೆ, ಅವರ ಪಕ್ಷ ರಹಸ್ಯವಾಗಿ ದೇಶದಲ್ಲಿ ಯುದ್ಧದಂತಹ ಸನ್ನಿವೇಶವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು.
ತಮಗೆ ಮತ ದೊರೆಯಲು ಬಿಜೆಪಿ ಪಶ್ಚಿಮಬಂಗಾಳ ಸಹಿತ ದೇಶಾದ್ಯಂತ ಇವಿಎಂಗಳನ್ನು ತಿರುಚುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
‘‘ಅವರು (ಬಿಜೆಪಿ) ಇವಿಎಂಗಳನ್ನು ತಿರುಚುವ ಸಾಧ್ಯತೆ ಇದೆ. ಪಶ್ಚಿಮಬಂಗಾಳ ಸೇರಿದಂತೆ ದೇಶಾದ್ಯಂತ ಇವಿಎಂಗಳನ್ನು ತಿರುಚಲು ಅವರು ಖಾಸಗಿ ಕಂಪೆನಿಯನ್ನು ಸಂಪರ್ಕಿಸಿದ್ದಾರೆ ಎಂದು ನಾನು ಕೇಳಿದ್ದೇನೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದರು.







