ರಸ್ತೆ ಪಕ್ಕದಲ್ಲೇ ತ್ಯಾಜ್ಯಗಳ ರಾಶಿ: ಸಾರ್ವಜನಿಕರಿಂದ ಕ್ರಮಕ್ಕೆ ಆಗ್ರಹ

ಹನೂರು, ಫೆ.25: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೈಮಹದೇಶ್ವರ ಬೆಟ್ಟಕ್ಕೆ ಸಾಗುವ ಮಾರ್ಗ ಮಧ್ಯೆ, ಕೌದಳ್ಳಿ ಗ್ರಾಪಂನ ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ತಾಜ್ಯಗಳನ್ನು ಎಸೆಯುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ದುರ್ವಾಸನೆಯಿದ್ದು, ಸಾರ್ವಜನಿಕರು ದಿನ ನಿತ್ಯ ಮೂಗು ಮುಚ್ಚಿಕೂಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಪಂ ವ್ಯಾಪ್ತಿಯ ಮಲೈಮಹದೇಶ್ವರಬೆಟ್ಟದ ಮುಖ್ಯ ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನ ಸವಾರರು ಸಂಚರಿಸುತ್ತಾರೆ. ಬೆಟ್ಟಕ್ಕೆ ದಿನ ನಿತ್ಯ ಭಕ್ತರ ದಂಡೇ ಹರಿದು ಹೋಗುವ ಈ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಸ್ಥಳೀಯ ಮಾಂಸದ ಅಂಗಡಿಗಳಿಂದ ಸಂಗ್ರಹಿಸಲಾಗಿದ್ದ ತ್ಯಾಜ್ಯವನ್ನು ಇಲ್ಲಿ ತಂದು ಎಸೆಯುತ್ತಾರೆ. ಈ ಮಾರ್ಗದಲ್ಲಿ ಮಲೈಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರಂತೂ ಈ ದುರ್ವಾಸನೆಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಗೋಳನ್ನು ಯಾರೂ ಕೇಳುವವರು ಇಲ್ಲದಂತಾಗಿದ್ದು, ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಿವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಗಮನ ಹರಿಸಬೇಕಾದ ಗ್ರಾಪಂ ನವರು ಇಲ್ಲಿನ ದೃಶ್ಯವನ್ನು ದಿನ ನಿತ್ಯ ನೋಡುತ್ತಿದ್ದರೂ ಸುಮ್ಮನಿದ್ದಾರೆ. ಒಟ್ಟಿನಲ್ಲಿ ಸಮಸ್ಯೆಯ ಬಗ್ಗೆ ಕೇಳುವವರು ಇಲ್ಲದಂತಾಗಿದೆ.
-ನೂರುಲ್ಲಾ, ಎಸ್‌ಡಿಪಿಐ ಹನೂರು ಘಟಕದ ಅಧ್ಯಕ್ಷ





