ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಸಮ್ಮತಿ ನೀಡಿದ ಎಚ್‌ಡಿಕೆ
ಸಚಿವ ಸಂಪುಟ ಸಭೆ ನಿರ್ಧಾರ

ಬೆಂಗಳೂರು, ಫೆ.25: ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ರಾಜ್ಯದಲ್ಲಿನ ಪರಿಶಿಷ್ಟ ನೌಕರರ ಮುಂಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರು ಮತ್ತು ಆ ಸಮುದಾಯದ ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟ ಸಭೆಯಲ್ಲಿ ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ವಿಧೇಯಕ ಜಾರಿ ಕುರಿತು ಪ್ರಸ್ತಾಪಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆಯವರಿಗೆ ಡಿಸಿಎಂ ಡಾ.ಪರಮೇಶ್ವರ್ ಸಹಿತ ಹಲವು ಸಚಿವರು ಧ್ಬನಿಗೂಡಿಸಿದ್ದಾರೆ ಎನ್ನಲಾಗಿದೆ.
ವಿಧೇಯಕ ಜಾರಿಯನ್ನು ವಿಳಂಬ ಮಾಡುವುದು ಸರಿಯಲ್ಲ. ಎಸ್ಸಿ, ಎಸ್ಟಿ ನೌಕರರ ಒತ್ತಡ ಹೆಚ್ಚಾಗಿದೆ. ಇನ್ನೂ ವಿಳಂಬ ಮಾಡಿದರೆ ನೌಕರರು ನಮ್ಮ ವಿರುದ್ದ ತಿರುಗಿ ಬೀಳುವ ಸಾಧ್ಯತೆಗಳಿವೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಮೀಪದಲ್ಲೆ ಲೋಕಸಭಾ ಚುನಾವಣೆ ಎದುರಾಗಲಿದ್ದು ಅದರ ಮೇಲೆ ಪರಿಣಾಮವಾಗಲಿದೆ. ಹೀಗಾಗಿ ಕಾಯ್ದೆ ಜಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.





