ಚಾಮುಂಡಿಬೆಟ್ಟದ ಪಾದದ ಬಳಿ ಬೆಂಕಿ: ಕಿಡಿಗೇಡಿಗಳ ಕೃತ್ಯ ಶಂಕೆ

ಮೈಸೂರು,ಫೆ.25: ಮೈಸೂರಿನ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಬಿಜಿಎಸ್ ಸಂಸ್ಥೆಗೆ ಸೇರಿದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಣಹುಲ್ಲುಗಳು, ತರಗೆಲೆಗಳಿದ್ದು, ಬಿಸಿಲಿನ ಝಳಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡತೊಡಗಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಠಾಣೆಗೆ ಮತ್ತು ಅರಣ್ಯ ಅಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದ್ದಾರೆ.
ಯಾರೋ ಕಿಡಿಗೇಡಿಗಳು ಸಿಗರೇಟ್ ತುಂಡನ್ನು ಎಸೆದ ಪರಿಣಾಮ ಬೆಂಕಿ ಹೊತ್ತಿರಬೇಕೆಂದು ಶಂಕಿಸಲಾಗಿದೆ. ಬೇಸಿಗೆ ಕಾಲವಾದ್ದರಿಂದ ಎಲ್ಲೆಡೆ ಗಿಡ-ಮರ-ಹುಲ್ಲುಗಳು ಒಣಗಿಕೊಂಡಿರುತ್ತದೆ. ಬಹುಬೇಗ ಬೆಂಕಿ ವ್ಯಾಪಿಸಿಕೊಂಡು ಬಿಡುತ್ತದೆ. ಆದ ಕಾರಣ ಸಿಗರೇಟ್ ಸೇದುವವರು ಬೆಂಕಿಯನ್ನು ದಯವಿಟ್ಟು ಹೊಸಕಿ ಹಾಕಿ. ಕಿಡಿಗೇಡಿಗಳು ಸುಖಾಸುಮ್ಮನೆ ಬೆಂಕಿಯನ್ನು ಹಚ್ಚಿ ಹೋಗಬೇಡಿ. ಅಕಸ್ಮಾತ್ ಕಿಡಿಗೇಡಿಗಳ ಕೃತ್ಯವೆಂದು ತಿಳಿದು ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







