ನೀವೇ ಇಸ್ಲಾಮ್‌ನ ನೈಜ ಶತ್ರುಗಳು: ನಿವೃತ್ತ ಸೇನಾಧಿಕಾರಿಯಿಂದ ಜೈಶೆ ಸಂಘಟನೆಗೆ ಬಹಿರಂಗ ಪತ್ರ
“ಬ್ರೈನ್ ವಾಶ್ ಮಾಡಲ್ಪಟ್ಟ ಯುವಕರಿಗೆ ಕುರ್ ಆನ್ ನಲ್ಲಿ ಏನಿದೆ ಎನ್ನುವುದೇ ಗೊತ್ತಿಲ್ಲ”

ಹೊಸದಿಲ್ಲಿ,ಫೆ.25: ನಿವೃತ್ತ ಭಾರತೀಯ ಸೇನಾಧಿಕಾರಿ ಮೇಜರ್ ಮುಹಮ್ಮದ್ ಅಲಿ ಶಾ ಅವರು ಪುಲ್ವಾಮ ದಾಳಿ ನಡೆಯ ಹೊಣೆ ಹೊತ್ತಿರುವ ಉಗ್ರ ಸಂಘಟನೆ ಜೈಶೆ ಮುಹಮ್ಮದ್‌ಗೆ ಬಹಿರಂಗ ಪತ್ರ ಬರೆದಿದ್ದು ಉಗ್ರ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಿಮ್ಮಂಥವರ ಕೆಟ್ಟ ಕಾರ್ಯಗಳಿಂದ ಇಡೀ ಮುಸ್ಲಿಂ ಸಮುದಾಯ ತಲೆಬಾಗಿಸುವಂತಾಗಿದೆ. ಇಸ್ಲಾಮ್ ನಲ್ಲಿ ಎಲ್ಲೂ ಯಾರನ್ನೂ ಕೊಲ್ಲುವಂತೆ ಹೇಳಿಲ್ಲ. ನೀವು ಇಸ್ಲಾಂನ ನಿಜವಾದ ಶತ್ರುಗಳು. ನಿಮ್ಮಿಂದಾಗಿ ನಮ್ಮ ಧರ್ಮಕ್ಕೆ ಕೆಟ್ಟ ಹೆಸರು ಬಂದಿದೆ” ಎಂದು ಶಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಶಾ ಅವರ ಪತ್ರ ಸಾರಾಂಶ ಹೀಗಿದೆ; 90ರ ದಶಕದಲ್ಲಿ ನನ್ನ ತಂದೆ ಮಣಿಪುರ, ನಾಗಾಲ್ಯಾಂಡ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡಾಯದ ವಿರುದ್ಧ ಹೋರಾಡುವುದನ್ನು ಕಂಡಿದ್ದೆ. ಸೇನೆಯಲ್ಲಿರುವಾಗ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರ ಪ್ರದೇಶಗಳಲ್ಲಿ ಬಂಡುಕೋರರ ಜೊತೆ ಹೋರಾಡಿದ್ದೇನೆ. ಆದರೆ ನಿಮ್ಮಿಂದಾಗಿ ಮುಸ್ಲಿಂ ಸಮುದಾಯಕ್ಕೆ ಮಾತ್ರ ಭಯೋತ್ಪಾದಕ ಎಂಬ ಹಣೆಪಟ್ಟಿ ಸಿಗುವಂತಾಗಿದೆ. ಇಸ್ಲಾಂ ಶಾಂತಿ ಬಯಸುವ ಧರ್ಮವಾಗಿದೆ. ಜಿಹಾದ್ ಎಂದರೆ ಹೋರಾಟ ಎಂದು ಅರ್ಥವೇ ಹೊರತು ಉಗ್ರವಾದವಲ್ಲ. ಇದನ್ನು ಮುಸ್ಲಿಮೇತರರು ಎಷ್ಟರ ಮಟ್ಟಿಗೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರೆ ಮಾಧ್ಯಮಗಳೂ ಇಸ್ಲಾಮನ್ನು ತಪ್ಪಾಗಿ ಪ್ರತಿನಿಧಿಸುತ್ತವೆ. ಇದಕ್ಕೆ ಕಾರಣ ನಿಮ್ಮಂಥ ಉಗ್ರ ಸಂಘಟನೆಗಳು. ನಿಮ್ಮಂಥ ಕೆಲವು ದಾರಿತಪ್ಪಿದ, ಅನಕ್ಷರಸ್ಥ ಮತ್ತು ಮಾನವೀಯತೆಯ ಶತ್ರುಗಳ ತಪ್ಪಿನಿಂದಾಗಿ ಮುಸ್ಲಿಂ ಸಮುದಾಯ ಮಾಡುವ ಉತ್ತಮ ಕಾರ್ಯಗಳೂ ನಿರ್ಲಕ್ಷಕ್ಕೊಳಪಡುತ್ತಿವೆ. ನೀವು ಬೆಳೆಸುವ ತಲೆಯಿಲ್ಲದ ಫಿದಾಯಿಗಳು ಸ್ವರ್ಗಕ್ಕೆ ಹೋಗುವುದಿಲ್ಲ ಬದಲಿಗೆ ನರಕದಲ್ಲಿ ಕೊಳೆಯಲಿದ್ದಾರೆ. ನೀವು ಬ್ರೈನ್‌ವಾಶ್ ಮಾಡಿರುವ ಯುವ, ನಿರುದ್ಯೋಗಿ, ನಿರ್ಲಕ್ಷಿತ ಯುವಕರಿಗೆ ಕುರ್ಆನ್‌ನಲ್ಲಿ ಏನು ಹೇಳಿದೆ ಎನ್ನುವುದೇ ತಿಳಿದಿಲ್ಲ. ಇದಕ್ಕೆಲ್ಲ ಶಿಕ್ಷಣವೇ ಪರಿಹಾರ. ನಾನೋರ್ವ ಹೆಮ್ಮೆಯ ಮುಸಲ್ಮಾನ ಮತ್ತು ಭಾರತೀಯ. ನಾನು ಸುಶಿಕ್ಷಿತ ಕೂಡಾ. ಶಿಕ್ಷಣವೆಂದರೆ ಕೇವಲ ಉತ್ತಮ ಶಾಲೆ, ಕಾಲೇಜಿನಲ್ಲಿ ಪಡೆದ ಶಿಕ್ಷಣ ಮಾತ್ರವಲ್ಲ ಜೊತೆಗೆ ಧರ್ಮ ಏನೆಂಬ ಬಗ್ಗೆ ನನಗೆ ನಿಮಗಿಂತ ಹೆಚ್ಚು ಅರಿವಿದೆ.
ನಿನ್ನಂಥ ಉಗ್ರ ಸಂಘಟನೆಗಳ ಸದಸ್ಯರು ಅನಕ್ಷರಸ್ಥರಾಗಿದ್ದು, ತಮ್ಮನ್ನೇ ವಿಶ್ಲೇಷಿಸುವುದನ್ನು ಕಲಿಯಬೇಕು. ನಾನು ಈ ಪತ್ರ ಬರೆಯಲು ಕಾರಣ ಇದು ಯಾವುದಾದರೊಂದು ರೀತಿಯಲ್ಲಿ ನಿನ್ನನ್ನು ತಲುಪಬಹುದು ಮತ್ತು ಎಲ್ಲಾದರೂ ಬದಲಾವಣೆ ತರಬಹುದು ಎಂಬ ನಂಬಿಕೆ. ಈ ಪತ್ರ ನಿನ್ನನ್ನು ತಲುಪುತ್ತದೆ ಮತ್ತು ನೀನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತಿ ಎಂದು ನಾನು ನಂಬುತ್ತೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳಷ್ಟು ವರ್ಷ ಬಂಡುಕೋರರ ವಿರುದ್ಧ ಹೋರಾಡಿರುವ ಕಾರಣ ನನಗೆ ಒಂದು ವಿಷಯ ಖಚಿತವಾಗಿದೆ. ನನ್ನ ಪ್ರಕಾರ ಕಾಶ್ಮೀರದ ಉಗ್ರವಾದಕ್ಕೆ ಮುಖ್ಯ ಕಾರಣ ಧರ್ಮ ಅಥವಾ ಜಿಹಾದ್ ಅಲ್ಲ. ನಿಜವಾದ ಕಾರಣ ನಿರುದ್ಯೋಗ. ನಿರುದ್ಯೋಗಿ ಯುವಕರು ಸೂಕ್ಷ್ಮಸಂವೇದಿಗಳಾಗಿದ್ದು ಗಡಿಯಾಚೆಗಿನ ಸ್ಥಾಪಿತ ಹಿತಾಸಕ್ತಿಗಳ ಪ್ರಚೋದಕ ಮಾತುಗಳಿಗೆ ಬೇಗನೆ ಮರುಳಾಗುತ್ತಾರೆ. ಅವರಿಗೆ ಶಿಕ್ಷಣ ಒದಗಿಸಿ ಸಬಲೀಕರಣಗೊಳಿಸಿ ಸ್ವಾವಲಂಬಿಗಳನ್ನಾಗಿ ಮಾಡಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬಹುದು ಎಂದು ಶಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಶಿಕ್ಷಣ ಒದಗಿಸಬೇಕು. ಶಿಕ್ಷಣದಿಂದ ಮಾತ್ರ ಸಮುದಾಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಶಾ ಅಭಿಪ್ರಾಯಿಸಿದ್ದಾರೆ.







