ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ಧರಣಿ

ದಾವಣಗೆರೆ,ಫೆ.25: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಪದಾಧಿಕಾರಿಗಳು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕಾರ್ಮಿಕರಿಗೆ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಉದ್ಯೋಗವಿಲ್ಲದೆ ಹಲವಾರು ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂ ಕನಿಷ್ಟ ವೇತನ ನಿಗದಿ ಮಾಡಬೇಕು. ಎಲ್ಲರಿಗೂ ಕನಿಷ್ಟ 3 ಸಾವಿರ ಮಾಸಿಕ ಪಿಂಚಣಿ ನೀಡಬೇಕು. ನಿಗದಿತ ಕಾಲಾವಧಿ ಕೆಲಸದ ಪದ್ದತಿ-ರದ್ದತಿ, ಕಾರ್ಪೋರೇಟ್ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಬಾರದೆಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಎಚ್.ಜಿ. ಉಮೇಶ್, ಖಜಾಂಚಿ ಆನಂದರಾಜ್, ಕಾರ್ಯದರ್ಶಿ ಆವರಗೆರೆ ವಾಸು, ಮುಖಂಡರಾದ ಟಿ.ಎಸ್. ನಾಗರಾಜ್, ಎನ್.ಟಿ. ಬಸವರಾಜ್, ವಿ. ಲಕ್ಷ್ಮಣ್, ಐರಣಿ ಚಂದ್ರು, ಎಂ.ಬಿ. ಶಾರದಮ್ಮ, ಸಿ. ರಮೇಶ್ ಇತರರು ಇದ್ದರು .





