ಐರ್ಲೆಂಡ್ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಅಫ್ಘಾನ್
ಟಿ20: ರಶೀದ್ ಖಾನ್ ಹ್ಯಾಟ್ರಿಕ್

ಡೆಹ್ರಾಡೂನ್, ಫೆ.25: ಖ್ಯಾತ ಸ್ಪಿನ್ನರ್ ರಶೀದ್‌ಖಾನ್ ಅವರ ಹ್ಯಾಟ್ರಿಕ್ ವಿಕೆಟ್ ನೆರವಿನಿಂದ ಐರ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಟಿ20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಅಫ್ಘಾನಿಸಾನ ತಂಡ 32 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಸರಣಿಯನ್ನು 3-0 ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ.
ರವಿವಾರ ರಾತ್ರಿ ಇಲ್ಲಿ ಕೊನೆಗೊಂಡ ಪಂದ್ಯದಲ್ಲಿ ಅಫ್ಘಾನ್ ನೀಡಿದ 211 ರನ್‌ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್, ರಶೀದ್ ಅವರ ಅಮೋಘ ಬೌಲಿಂಗ್ (27ಕ್ಕೆ 5)ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 178ಕ್ಕೆ 8 ವಿಕೆಟ್ ಕಳೆದುಕೊಂಡು ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಮುಹಮ್ಮದ್ ನಬಿಯ ಭರ್ಜರಿ ಅರ್ಧಶತಕದ(81, 36 ಎಸೆತ) ಬಲದಿಂದ 7 ವಿಕೆಟ್‌ಗೆ 210 ರನ್ ಜಮೆ ಮಾಡಿತ್ತು. ಗುರಿ ಬೆನ್ನಟ್ಟಿದ್ದ ಐರ್ಲೆಂಡ್‌ಗೆ ಕೆವಿನ್ ಓಬ್ರಿಯಾನ್(74) ಹಾಗೂ ಬಲ್‌ಬೈರ್ನ್(47) 2ನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದರು. ಈ ವೇಳೆ ಆ ತಂಡದ ಗೆಲುವಿನಾಸೆ ಚಿಗುರಿತ್ತು. ಆದರೆ ಲೆಗ್ ಸ್ಪಿನ್ನರ್ ರಶೀದ್ ಅವರ ಬೌಲಿಂಗ್ ಅದಕ್ಕೆ ಕಲ್ಲು ಹಾಕಿತು.
ರಶೀದ್ 16ನೇ ಓವರ್‌ನ ಕೊನೆಯ ಎಸೆತದಲ್ಲಿ ಕೆವಿನ್, 18ನೇ ಓವರ್‌ನ ಮೊದಲ ಎಸೆತದಲ್ಲಿ ಡಾಕ್‌ರೆಲ್ ಹಾಗೂ ಅದೇ ಓವರ್‌ನ 2ನೇ ಎಸೆತದಲ್ಲಿ ಗೆಟ್‌ಕೇಟ್‌ಗೆ ಪೆವಿಲಿಯನ್ ಹಾದಿ ತೋರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಆ ಮೂಲಕ ಅಂತರ್‌ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಮೊದಲ ಸ್ಪಿನ್ನರ್ ಎನಿಸಿಕೊಂಡರು.
ಮುಹಮ್ಮದ್ ನಬಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.







