ಅಭಿಜೀತ್ ಗುಪ್ತಾಗೆ ಕ್ಯಾನ್ನೆಸ್ ಅಂ.ರಾ. ಚೆಸ್ ಪ್ರಶಸ್ತಿ

ಕ್ಯಾನ್ನೆಸ್, ಫೆ.25: ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ಇಟಲಿಯ ಪಿಯರ್ ಲ್ಯೂಗಿ ಬ್ಯಾಸೊ ವಿರುದ್ಧ ಡ್ರಾ ಸಾಧಿಸಿದ ಭಾರತದ ಗ್ರಾಂಡ್‌ಮಾಸ್ಟರ್ ಅಭಿಜೀತ್ ಗುಪ್ತಾ ಸೋಮವಾರ ಕ್ಯಾನ್ನೆಸ್ ಅಂತರ್‌ರಾಷ್ಟ್ರೀಯ ಓಪನ್ ಚೆಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಆವೃತ್ತಿಯನ್ನು ಟೈನೊಂದಿಗೆ ಕೊನೆಗೊಳಿಸಿದ್ದ ಅಭಿಜೀತ್ ಈ ಬಾರಿಯ ಟೂರ್ನಿಯಲ್ಲಿ 7.5 ಅಂಕ ಗಳಿಸಿ ಸಮೀಪದ ಪ್ರತಿಸ್ಪರ್ಧಿಗಳಾದ ಬೆಲಾರಸ್‌ನ ನಿಖಿತಾ ಮೈರೊವ್, ಪೋಲೆಂಡ್‌ನ ನಾಸುತಾ ಗ್ರೆಗೋರ್ ಹಾಗೂ ಉಕ್ರೇನ್‌ನ ಯೂರಿ ಸೋಲೊಡೊವ್ನಿಚೆಕೊ ವಿರುದ್ಧ ಸ್ಪಷ್ಟ ಮುನ್ನಡೆ ಪಡೆದರು.
ಪ್ರಥಮ ನಾಲ್ಕು ಸುತ್ತುಗಳಲ್ಲಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಅವರು ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಮತ್ತೆ ಎರಡು ಜಯ ಹಾಗೂ 3 ಡ್ರಾ ಸಾಧಿಸಿ ಟ್ರೋಫಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
Next Story





