ಇಂಗ್ಲಿಷ್ ಲೀಗ್ ಪ್ರಶಸ್ತಿ ಉಳಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ
ಪೆನಾಲ್ಟಿ ಶೂಟೌಟ್‌ನಲ್ಲಿ ಚೆಲ್ಸಿ ಔಟ್
ಲಂಡನ್, ಫೆ.25: ಅತ್ಯಂತ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಚೆಲ್ಸಿ ತಂಡವನ್ನು 4-3 ಅಂತರದಿಂದ ಮಣಿಸಿದ ಮ್ಯಾಂಚೆಸ್ಟರ್ ಸಿಟಿ ತಂಡ ಇಂಗ್ಲಿಷ್ ಲೀಗ್ ಕಪ್‌ನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.
ಹೆಚ್ಚುವರಿ ಸಮಯದ ತನಕವೂ ಉಭಯ ತಂಡಗಳ ಗೋಲು ಬಾರಿಸಲು ವಿಫಲವಾದ ಕಾರಣ ಪಂದ್ಯ ಗೋಲುರಹಿತವಾಗಿ ಕೊನೆಗೊಂಡಿತು. ಶೂಟೌಟ್‌ನಲ್ಲಿ ಗೆಲುವು ದಕ್ಕಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ ವರ್ಷದ ಮೊದಲ ಪ್ರಮುಖ ಪ್ರಶಸ್ತಿ ಗೆಲ್ಲಲು ಸಮರ್ಥವಾಯಿತು.
‘‘ಖಂಡಿತವಾಗಿಯೂ ನನಗೆ ತುಂಬಾ ಸಂತೋಷವಾಗಿದೆ. ಅತ್ಯುತ್ತಮ ಪ್ರದರ್ಶನ ನೀಡಿದ ಚೆಲ್ಸಿ ತಂಡಕ್ಕೆ ಅಭಿನಂದನೆ ಸಲ್ಲಿಸುವೆ. ಕ್ಲಬ್ ಇತಿಹಾಸದಲ್ಲಿ ಮೊದಲ ಬಾರಿ ಈ ಸ್ಪರ್ಧೆಯಲ್ಲಿ ಸತತ ಜಯ ದಾಖಲಿಸಿದ್ದಕ್ಕೆ ಖುಷಿಯಾಗುತ್ತಿದೆ’’ ಎಂದು ಮ್ಯಾನೇಜರ್ ಆಗಿ 25ನೇ ಪ್ರಮುಖ ಟ್ರೋಫಿ ಗೆದ್ದುಕೊಂಡ ಮ್ಯಾಂಚೆಸ್ಟರ್ ಸಿಟಿ ತಂಡದ ಕೋಚ್ ಪೆಪ್ ಗ್ವಾರ್ಡಿಯೊಲಾ ಹೇಳಿದ್ದಾರೆ.
ಇದೀಗ ಮ್ಯಾಂಚೆಸ್ಟರ್ ಸಿಟಿ ಆರು ಋತುವಿನಲ್ಲಿ ನಾಲ್ಕನೇ ಬಾರಿ ಲೀಗ್ ಕಪ್‌ನ್ನು ಜಯಿಸಿದ ಸಾಧನೆ ಮಾಡಿದೆ. ಒಟ್ಟು ಆರು ಬಾರಿ ಪ್ರಶಸ್ತಿ ಜಯಿಸಿ ಸಾರ್ವಕಾಲಿಕ ಶ್ರೇಷ್ಠ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದಾಖಲೆ 8 ಬಾರಿ ಇಂಗ್ಲಿಷ್ ಲೀಗ್ ಟ್ರೋಫಿ ಜಯಿಸಿರುವ ಲಿವರ್‌ಪೂಲ್ ಮೊದಲ ಸ್ಥಾನದಲ್ಲಿದೆ.





