ಪುಲ್ವಾಮ ಭಯೋತ್ಪಾದಕ ದಾಳಿಗೆ ಬಳಸಿದ ವಾಹನದ ಮಾಲಕ ಜೆಇಎಂಗೆ ಸೇರ್ಪಡೆ

ಹೊಸದಿಲ್ಲಿ, ಫೆ. 25: ಪುಲ್ವಾಮದಲ್ಲಿ ಆತ್ಮಾಹುತಿ ದಾಳಿಗೆ ಬಳಸಲಾದ ಸ್ಫೋಟಕ ತುಂಬಿದ ಮಿನಿ ವ್ಯಾನ್‌ನ ಮಾಲಕ ತಲೆಮರೆಸಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ವಾಹನದ ಅವಶೇಷಗಳನ್ನು ಜೋಡಿಸಲು ಸಾಧ್ಯವಾಗಿದೆ. ಮಾತ್ರವಲ್ಲದೆ ವಾಹನದ ಚೇಸಿಸ್ ಸಂಖ್ಯೆ ಹಾಗೂ ನೋಂದಣಿ ಸಂಖ್ಯೆ ಗುರುತಿಸಲು ಕೂಡ ಸಫಲರಾಗಿದ್ದೇವೆ ಎಂದು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
2011ರಲ್ಲಿ ಮಾರುತಿ ಸುಝುಕಿ ಎಕ್ಕೊ ವ್ಯಾನ್ ಅನ್ನು ತರಲಾಯಿತು. ಹಾಗೂ ಅನಂತರ ಅದು 7 ಜನರ ಕೈಗೆ ಹಸ್ತಾಂತರಗೊಂಡಿತ್ತು. ಅದರ ಕೊನೆಯ ಖರೀದಿಗಾರ 19ರ ಹರಯದ ಸಜ್ಜಾದ್ ಭಟ್. ಈತ ಅನಂತ್‌ನಾಗ್‌ನ ಬಿಜ್‌ಬೆಹ್ರಾದ ನಿವಾಸಿ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕ ದಾಳಿ ನಡೆಯುವ ಕೇವಲ 10 ದಿನಕ್ಕಿಂತ ಮುನ್ನ ಈ ವಾಹನ ಖರೀದಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ. ಆದರೆ, ಫೆಬ್ರವರಿ 23ಕ್ಕೆ ಸಜ್ಜಾದ್‌ನ ಮನೆಗೆ ದಾಳಿ ನಡೆಸಿದ್ದ ಪೊಲೀಸರು ಬರಿಗೈಯಲ್ಲಿ ಹಿಂದಿರುಗಿದ್ದರು.
ದಾಳಿಯ ದಿನ ಆತ ಕಣ್ಮರೆಯಾಗಿದ್ದ ಎಂದು ಮೂಲಗಳು ತಿಳಿಸಿವೆ. ಸೋಮವಾರ ಜೈಶೆ ಮುಹಮ್ಮದ್ ಸಂಘಟನೆಗೆ ಸೇರಿರುವುದಾಗಿ ಘೋಷಿಸುವ ಬಂದೂಕು ಹಿಡಿದುಕೊಂಡ ಈತನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ ಎಂದು ತನಿಖಾಧಿ ಕಾರಿಗಳು ತಿಳಿಸಿದ್ದಾರೆ.







