ಅರ್ಹತೆ ಗಳಿಸಲು ಭಾರತೀಯ ಸ್ಪರ್ಧಿಗಳು ವಿಫಲ
ಐಎಸ್‌ಎಸ್‌ಎಫ್ ವಿಶ್ವಕಪ್ 10 ಮೀ. ಏರ್ ರೈಫಲ್
ಹೊಸದಿಲ್ಲಿ, ಫೆ.25: ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅರ್ಹತೆ ಗಳಿಸುವಲ್ಲಿ ಭಾರತೀಯ ಸ್ಪರ್ಧಿಗಳು ಸೋಮವಾರ ವಿಫಲರಾದರು.
ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಮೂವರು ಭಾರತೀಯ ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪನ್ವಾರ್, ರವಿಕುಮಾರ್ ಹಾಗೂ ದೀಪಕ್ ಕುಮಾರ್ ಕ್ರಮವಾಗಿ 12, 14 ಹಾಗೂ 34ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು. ಟೂರ್ನಿಯ ಮೊದಲೆರಡು ದಿನಗಳಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ಚಾಂಡೇಲಾ ಹಾಗೂ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದ ಬಳಿಕ ಇಂದು ವಿಫಲ ಫಲಿತಾಂಶ ಹೊರಬಿದ್ದಿದೆ.
ಅರ್ಹತಾ ಸುತ್ತಿನಲ್ಲಿ ವಿಶ್ವಕಪ್ ಪದಕ ವಿಜೇತ ರವಿ 627 ಅಂಕ, ದೀಪಕ್ 624.3 ಹಾಗೂ ದಿವ್ಯಾಂಶ್‌ಸಿಂಗ್ 627.2 ಅಂಕಗಳನ್ನು ಪಡೆದರು.
2020ರ ಟೋಕಿಯೊ ಒಲಿಂಪಿಕ್ಸ್ ಗೆ ತಮ್ಮ ಕೋಟಾಗಳನ್ನು ಪಡೆಯಲು ಅವರು ಮುಂದಿನ ವಿಶ್ವಕಪ್‌ವರೆಗೂ ಕಾಯಬೇಕಾಗಿದೆ.
ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ರಶ್ಯದ ಸೆರ್ಜಿ ಕೆಮೆನ್‌ಸ್ಕಿ 249.4 ಅಂಕಗಳೊಂದಿಗೆ ಬಂಗಾರ, ಚೀನಾ ಜೋಡಿಯಾದ ಯುಕುನ್ ಲಿವ್ 247.0 ಅಂಕಗಳೊಂದಿಗೆ ಬೆಳ್ಳಿ ಹಾಗೂ ಝಿಚೆಂಗ್ ಹ್ಯು 225,9 ಅಂಕ ಗಳಿಸಿ ಕಂಚಿನ ಪದಕ ಗೆದ್ದುಕೊಂಡರು.







