ಉಗ್ರತಾಣಗಳ ಧ್ವಂಸಗೈದು ಭಾರತಕ್ಕೆ ಹೆಮ್ಮೆ ತಂದ ವಾಯುಪಡೆಗೆ ಶಹಬ್ಬಾಸ್ ಎಂದ ದೇಶದ ಜನತೆ
ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಮಹಾಪೂರ

ಹೊಸದಿಲ್ಲಿ, ಫೆ.26: ಗಡಿಯಾಚೆಗೆ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಪಡೆಯ ಸಾಧನೆಯನ್ನು ದೇಶಾದ್ಯಂತ ನಾಗರಿಕರು, ರಾಜಕಾರಣಿಗಳು, ಕ್ರೀಡಾಪಟುಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್ ಗಳಲ್ಲಿ ದೇಶದ ಎಲ್ಲಾ ಧರ್ಮ, ಜಾತಿಗಳ ಜನರು ವಾಯುಪಡೆಯ ಸಾಹಸಕ್ಕೆ ಶಹಬ್ಬಾಸ್ ಎಂದಿದ್ದಾರೆ. ಪಕ್ಷ ಬೇಧ ಮರೆತು ರಾಜಕಾರಣಿಗಳು ಸೇನೆಯ ಸಾಹಸವನ್ನು ಮೆಚ್ಚಿದ್ದಾರೆ. ಇಂದು ಗಡಿಯಾಚೆಗೆ ಲಗ್ಗೆಯಿಟ್ಟ ವಾಯುಪಡೆಯ ವಿಮಾನಗಳು ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಸುಮಾರು 300 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ವಾಯುಪಡೆಯ ಸಾಹಸವನ್ನು ಮೆಚ್ಚಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರಾಹುಲ್ ಗಾಂಧಿ, ಒಮರ್ ಅಬ್ದುಲ್ಲಾ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಮಿತ್ ಶಾ ಮತ್ತಿತರ ರಾಜಕೀಯ ನಾಯಕರು ಟ್ವೀಟ್ ಮಾಡಿದ್ದಾರೆ.
“ಈ ದಾಳಿ ಪಾಕಿಸ್ತಾನಕ್ಕೆ ಮುಖಭಂಗ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಣ್ಣಿಸಿದ್ದಾರೆ. “ಇದು ಯಾರ ಕಲ್ಪನೆಗೂ ಬಾರದ ದಾಳಿ” ಎಂದು ಅವರು ಹೇಳಿದ್ದಾರೆ. “ಬಾಲಕೋಟ್ ವಾಯುದಾಳಿಯೊಂದಿಗೆ ನಾವು ಹೊಸ ಆಯಾಮ ಪ್ರವೇಶಿಸಿದ್ದೇವೆ. ಉರಿ ದಾಳಿ ಬಳಿಕ ನಡೆದ ದಾಳಿ ಪ್ರತೀಕಾರದ ಕ್ರಮವಾಗಿದ್ದರೆ, ಬಾಲಕೋಟ್ ದಾಳಿ ಜೆಇಎಂ ದಾಳಿ ತಡೆಯಲು ಅನಿವಾರ್ಯವಾಗಿತ್ತು” ಎಂದು ಹೇಳಿದ್ದಾರೆ.
"ಭಾರತೀಯ ವಾಯುಪಡೆ ಪೈಲಟ್ ಗಳ ಸಾಹಸಕ್ಕೆ ದೊಡ್ಡ ಸೆಲ್ಯೂಟ್ ಸಲ್ಲಬೇಕು. ಪಾಕಿಸ್ತಾನದ ಉಗ್ರರ ಗುಂಪಿನ ಮೇಲೆ ದಾಳಿ ಮಾಡುವ ಮೂಲಕ ನಾವು ಹೆಮ್ಮೆಪಡುವಂತೆ ಮಾಡಿದ್ದಾರೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ವಾಯುಪಡೆಯ ಪೈಲಟ್ ಗಳಿಗೆ ಸೆಲ್ಯೂಟ್ ಹೇಳಲೇಬೇಕು ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ವಾಯುಪಡೆಯನ್ನು ಶ್ಲಾಘಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ಮೋದಿ ಸರ್ಕಾರ ಈ ಮೊದಲೇ ರಕ್ಷಣಾ ಪಡೆಗಳಿಗೆ ಮುಕ್ತಹಸ್ತ ನೀಡಿದ್ದರೆ ಉರಿ, ಪಠಾಣ್ ಕೋಟ್ ನಂತಹ ದಾಳಿ ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.







