ಮಾ.2, 3 ರಂದು ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ: ಡಾ.ಸುಧಾಮೂರ್ತಿ ಸಮ್ಮೇಳನಾಧ್ಯಕ್ಷೆ

ಚಿಕ್ಕಮಗಳೂರು, ಫೆ.26: ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.2 ಮತ್ತು 3ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ಸಮಾಜ ಸೇವಕಿ, ಸಾಹಿತಿ, ಲೇಖಕಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನಿರ್ಣಯದಂತೆ ರಾಜ್ಯ ಮಟ್ಟದ ಸಾಹಿತ್ಯ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಮೊದಲ ದಿನ ಮಾ.2ರಂದು ಶನಿವಾರ ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ನಾಡಿನ 5 ಮಹಿಳಾ ಗೋಷ್ಠಿಗಳು, ಮಹಿಳಾ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಮಹಿಳಾ ಘೋಷ್ಠಿಗಳಲ್ಲಿ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳು, ಮಹಿಳಾ ಹೋರಾಟಗಾರರು, ಲೇಖಕಿಯರೂ ಸೇರಿದಂತೆ ಕಸಾಪ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರು, ರಾಜ್ಯದ 5 ಗಡಿನಾಡು ಘಟಕಗಳ ಅಧ್ಯಕ್ಷರು, 44 ಪದಾಧಿಕಾರಿಗಳು ಮತ್ತು 60 ಮಂದಿ ಲೇಖಕಿಯರು, ಕವಯತ್ರಿಗಳು, ಕಲಾವಿದರು ಸಮ್ಮೇಳನ ಹಾಗೂ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ವಿಪ ಉಪಸಭಾಪತಿ, ಧರ್ಮೇಗೌಡ, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಬರಹಗಾರ್ತಿ ರಾಜೇಶ್ವರಿ ತೇಜಸ್ವಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಡಿ.ಎಸ್.ಸುರೇಶ್, ಎಂ.ಕೆ.ಪ್ರಾಣೇಶ್ ಭಾಗವಹಿಲಿದ್ದಾರೆಂದ ಅವರು, ಮಾ.3ರಂದು ರವಿವಾರ ನಡೆಯುವ ಸಮಾರೋಪ ಸಮಾರಂಭವು ಸಮ್ಮೇಳನಾಧ್ಯಕ್ಷೆ ಡಾ.ಸುಧಾಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಡಾ.ಮನು ಬಳಿಗಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಟಿ.ಡಿ.ರಾಜೇಗೌಡ, ಬೆಳ್ಳಿಪ್ರಕಾಶ್, ಲೇಖಕಿ ಸವಿತಾ ಶ್ರೀನಿವಾಸ್, ಸಿಇಒ ಡಾ.ಅಶ್ವಥಿ ಗೌತಮ್, ಮಾಜಿ ಸಚಿವೆಯರಾದ ಮೋಟಮ್ಮ, ಡಿ.ಕೆ.ತಾರದೇವಿ ಸಿದ್ಧಾರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಕುಂದೂರು ಅಶೋಕ್ ಮಾಹಿತಿ ನೀಡಿದರು.
ಕಸಪಾ ಜಿಲ್ಲಾ ಕಸಾಪದ ಪ್ರೊ.ಲಕ್ಷ್ಮೀಕಾಂತ್ ಮಾತನಾಡಿ, ಸಮ್ಮೇಳನದ ಮೊದಲ ದಿನ ಮಾ.2ರಂದು ಮಧ್ಯಾಹ್ನ ಕನ್ನಡ ಸಾಹಿತ್ಯ: ಮಹಿಳಾ ನೋಟ ಹಾಗೂ ಸಮ್ಮೇಳನಾಧ್ಯಕ್ಷೆಯೊಂದಿಗೆ ಸಂವಾದ ಗೋಷ್ಠಿ ಜರಗಲಿದ್ದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.3ರಂದು 10ರಿಂದ 12ರವರೆಗೆ ವಿವಿಧ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ ಗೋಷ್ಠಿ ನಡೆಯಲಿದ್ದು, 12ರಿಂದ 2ರವರೆಗೆ ಮಹಿಳೆ ಮತ್ತು ಚಳವಳಿ ಗೋಷ್ಠಿ ಜರಗಲಿದೆ. ನಂತರ ಮಹಿಳಾ ಕವಿಘೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪದ ಮಂಜುನಾಥ್, ವಾಣಿ, ಪುಷ್ಪಾ ರಾಜೇಂದ್ರ ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ನಗರದ ಎಂ.ಜಿ ರಸ್ತೆಯ ಗಣಪತಿ ದೇವಾಲಯದಿಂದ ಕುವೆಂಪು ಕಲಾಮಂದಿರದವರೆಗೆ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಜಿಲ್ಲೆಯ ಕಲಾ ಪ್ರಕಾರಗಳಾದ ಮಹಿಳಾ ವೀರಗಾಸೆ, ಡೊಳ್ಳುಕುಣಿತ, ಚಿಟ್ಟಿಮೇಳ, ಪಟಕುಣಿತ, ಸುಗ್ಗಿಕುಣಿತ ಮತ್ತಿತರ ಕಲಾ ತಂಡಗಳೂ ಸೇರಿದಂತೆ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿನಿಯರು, ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಶೇ.95ರಷ್ಟು ಮಹಿಳೆಯರಿಂದಲೇ ನಡೆಯಲಿದೆ. ಸಮ್ಮೇನಕ್ಕಾಗಿ ಕೇಂದ್ರ ಕಸಾಪ 10 ಲಕ್ಷ ರೂ. ಅನುದಾನ ನೀಡಿಸಲಾಗಿದೆ. ಸಿದ್ಧತೆ ಪೂರ್ಣಗೊಂಡಿದ್ದು, ಸಮ್ಮೇಳನದ ಯಶಸ್ವಿಗೆ ವ್ಯಾಪಕ ಪ್ರಚಾರ ಚಟುವಟಿಕೆ ಆರಂಭಿಸಲಾಗಿದೆ.
- ಕುಂದೂರು ಅಶೋಕ್







