ಮನಪಾ: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ, ಸವಲತ್ತು ವಿತರಣೆ

ಮಂಗಳೂರು, ಫೆ.26: ನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ- ಕೆಐಯುಡಬ್ಲುಎಂಐಪಿ ಸಹಯೋಗದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ನಗರ ಬಡತನ ನಿರ್ಮೂಲನಾ ಕೋಶದಡಿ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಇಂದು ನಡೆಯಿತು.
ನಗರದ ಲೇಡಿಹಿಲ್ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಅವರು ಮಾತನಾಡಿ, ನಗರದಲ್ಲಿ 855 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿರುವುದಾಗಿ ಹೇಳಿದರು.
ನಗರದಲ್ಲಿ ವಸತಿ ರಹಿತರಿಗೆ ಪ್ರಥಮ ಹಂತದಲ್ಲಿ 1000 ಮಂದಿಗೆ ಗೃಹಭಾಗ್ಯ ಕಲ್ಪಿಸಲು ಕಣ್ಣೂರಿನಲ್ಲಿ ಜಾಗ ಗುರುತಿಸಲಾಗಿದೆ. 28.5 ಕೋಟಿ ರೂ. ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಒಂದು ವಾರದೊಳಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಸಚಿವ ಯು.ಟಿ.ಖಾದರ್ ಹೇಳಿದರು.
ಶಕ್ತಿನಗರದಲ್ಲಿಯೂ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಅಲ್ಲಿ ಎದ್ದಿರುವ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ ಅವರು, ಆದ್ಯತೆ ಮೇರೆಗೆ ನಗರದಲ್ಲಿ ಮನೆಗಳಿಗೆ ಜಾಗ ಮೀಸಲಿಡುವ ಕೆಲಸವನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಅರ್ಜಿ ಸಮರ್ಪಕವಾಗಿದ್ದರೆ ವಾರದೊಳಗೆ ಉದ್ದಿಮೆ ಪರವಾನಿಗೆ ಒದಗಿಸಿ
ಮನಪಾ ವ್ಯಾಪ್ತಿಯಲ್ಲಿ ಜನನ- ಮರಣ ಪ್ರಮಾಣ ಪತ್ರ ಅರ್ಜಿ ಸಲ್ಲಿಸಿದಂದೇ ಸಿಗುವಂತಾಗಬೇಕು. ಉದ್ದಿಮೆ ಪರವಾನಿಗೆ ಅರ್ಜಿ ಸಮರ್ಪಕವಾಗಿದ್ದಲ್ಲಿ ಒಂದು ವಾರದೊಳಗೆ ಪರವಾನಿಗೆ ಒದಗಿಸಬೇಕು ಎಂದು ಸಚಿವ ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ವಿಕೇಲಚೇತನರಿಗೆ ವಿವಿಧ ಸವಲತ್ತುಗಳು, ವೈದ್ಯಕೀಯ ವೆಚ್ಚ, ಶೌಚಾಲಯಕ್ಕೆ ಸಹಾಯಧನ, ವಿದ್ಯಾ ಪ್ರೋತ್ಸಾಹ ಧನ, ಲ್ಯಾಪ್ ಟಾಪ್, ಮನೆ ರಿಪೇರಿ, ಪೋಷಣಾ ಭತ್ತೆ ಸೇರಿದಂತೆ ಒಟ್ಟು 679 ಫಲಾನುಭವಿಗಳಿಗೆ ಒಟ್ಟು 45,48,200 ರೂ.ಗ ಸೌಲಭ್ಯಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಮೇಯರ್ ಭಾಸ್ಕರ ಕೆ., ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಲತಾ ಸಾಲ್ಯಾನ್, ಪ್ರವೀಣ ಚಂದ್ರ ಆಳ್ವ, ರಾಧಾಕೃಷ್ಣ, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಸದಸ್ಯರಾದ ಅಶೋಕ್ ಡಿ.ಕೆ, ಕೇಶವ್, ಜಯಂತಿ ಆಚಾರ್, ಪೂರ್ಣಿಮಾ, ಮೀರಾ ಕರ್ಕೇರಾ, ರಮೀಝಾ, ಕೆಯುಐಡಿಎಪ್‌ಸಿಯ ಉಪ ಯೋಜನಾ ನಿರ್ದೇಶಕ ಬಿ.ಎಚ್. ನಾರಾಯಣಪ್ಪ ಉಪಸ್ಥಿತರಿದ್ದರು.
ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಸ್ವಾಗತಿಸಿದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಯೋಧರಿಗೆ ಸೆಲ್ಯೂಟ್‌ನ ಗೌರವ
ಸಚಿವ ಖಾದರ್‌ರವರು ತಮ್ಮ ಉದ್ಘಾಟನಾ ಭಾಷಣದ ಕೊನೆಯಲ್ಲಿ ಇಂದು ವಾಯುಸೇನೆ ಸೇರಿದಂತೆ ಯೋಧರಿಗೆ ಅಭಿನಂದನೆ ಸಲ್ಲಿಸುತ್ತಾ ಅಲ್ಲಿ ಸೇರಿದ್ದವರೊಂದಿಗೆ ಗೌರವಪೂರ್ವಕ ಸೆಲ್ಯೂಟ್ ಸಲ್ಲಿಸಿದರು. ಜೈಹಿಂದ್, ವಂದೇಮಾತರಂ ಘೋಷಣೆಯೊಂದಿಗೆ ಭಾರತೀಯ ಸೇನೆಗೆ ಗೌರವ ಸಲ್ಲಿಸಿದರು.
ನಿಗದಿತ ಅವಧಿಯಲ್ಲಿ ಆರಂಭವಾಗದ ಕಾರ್ಯಕ್ರಮ
ವಿವಿಧ ಸವಲತ್ತುಗಳನ್ನು ಸ್ವೀಕರಿಸಲು ಫಲಾನುಭವಿಗಳಾಗಿ ಬಂದಿದ್ದ ವಿಕಲಚೇತನರು ಕೂಡಾ ಸಚಿವರು ಹಾಗೂ ಜನಪ್ರತಿನಿಧಿಗಳ ಆಗಮನ ತಡವಾದ ಕಾರಣ ಕಾಯಬೇಕಾದ ಪರಿಸ್ಥಿತಿ ಇಂದಿನ ಕಾರ್ಯಕ್ರಮದ್ದು. ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಅದಾಗಲೇ ನೂರಾರು ಸಂಖ್ಯೆಯಲ್ಲಿ ವಿಕಲಚೇತನರು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. ಆದರೆ ಸಚಿವರು ಆಗಮಿಸುವಾಗ 4.20 ಆಗಿತ್ತು. ಆ ಬಳಿಕವಷ್ಟೇ ಸಭಾ ಕಾರ್ಯಕ್ರಮ ಆರಂಭಗೊಂಡಿತು.











