ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ: ಯಡಿಯೂರಪ್ಪ

ಚಿಕ್ಕಮಗಳೂರು, ಫೆ.26: ಪುಲ್ವಾಮದಲ್ಲಿ ಉಗ್ರರ ಹೇಡಿ ಕೃತ್ಯದಿಂದಾಗಿ ಹುತಾತ್ಮರಾದ ಸೈನಿಕರ ಕುಟುಂಬದ ಕಣ್ಣೀರಿಗೆ ಪ್ರಧಾನಿ ಮೋದಿ ಅವರು ಉಗ್ರರ ಹುಟ್ಟಡಗಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ದೇವಾಂಗ ನೌಕರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಗಡಿಯಲ್ಲಿನ ಉಗ್ರರ ಅಡಗುದಾಣಗಳ ಮೇಲೆ ವಾಯು ದಾಳಿ ಮೂಲಕ ಧ್ವಂಸ ಮಾಡಿದ ಘಟನೆಗೆ ಸೇನೆಯನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಉಗ್ರರ ಹುಟ್ಟಡಗಿಸುವವರೆಗೂ ಪ್ರಧಾನಿ ನರೇಂದ್ರ ಮೋದಿ ಸುಮ್ಮನಿರೊಲ್ಲ. ನಮ್ಮ 45 ಮಂದಿ ಸೈನಿಕರ ಬಲಿದಾನಕ್ಕೆ ಕೇಂದ್ರ ಸರಕಾರ ಉಗ್ರರಿಗೆ ತಕ್ಕ ಶಾಸ್ತಿ ಮಾಡಲಿದೆ ಎಂದರು.
ಪುಲ್ವಾಮ ದಾಳಿಯಾದಾಗ ಪ್ರಧಾನಿ ಮೋದಿ ಅವರು, ಸೈನಿಕರ ಹನಿ ರಕ್ತಕ್ಕೂ ಉತ್ತರ ಕೊಡುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೆ ಅವರು ಮಂಗಳವಾರ ಮುಂಜಾನೆ ಪಾಕಿಸ್ತಾನದ ಗಡಿಯಲ್ಲಿ ಉಗ್ರರ 5 ಶಿಬಿರಗಳನ್ನು ಧ್ವಂಸ ಮಾಡಿರುವುದು ಪ್ರಧಾನಿ ಅವರ ಮಾತಿನ ಬದ್ಧತೆಗೆ ಸಾಕ್ಷಿ ಎಂದ ಅವರು, ಉಗ್ರರ ದಮನ ಇಲ್ಲಿಗೆ ಮುಗಿಯುವುದಿಲ್ಲ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನಕ್ಕೆ ಇನ್ನೂ ತಕ್ಕ ಶಾಸ್ತಿ ಮಾಡಬೇಕಿದೆ. ಪುಲ್ವಾಮ ದಾಳಿ ಬಳಿಕ ಇಡೀ ವಿಶ್ವ ಪಾಕಿಸ್ತಾನಕ್ಕೆ ಚೀಮಾರಿ ಹಾಕಿದೆ. ಆ ದೇಶಕ್ಕೆ ವಿಶ್ವಾದ್ಯಂತ ಸಿಗುವ ಎಲ್ಲ ಸವಲತ್ತು ಬಂದ್ ಆಗುವವರೆಗೂ ಮೋದಿ ವಿರಮಿಸುದಿಲ್ಲ ಎಂದರು.







