ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದೆ: ಸಿ.ಟಿ ರವಿ

ಚಿಕ್ಕಮಗಳೂರು, ಫೆ.26: ಉಗ್ರರ ಅಡಗುತಾಣಗಳನ್ನು ನಾಶಪಡಿಸುವ ಮೂಲಕ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವಂತ ಕೆಲಸವನ್ನು ಭಾರತ ಸೇನೆ ಹಾಗೂ ಭಾರತ ಸರಕಾರ ಮಾಡಿದ್ದಕ್ಕಾಗಿ ಅಭಿನಂದಿತ್ತೇನೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮಾದರಿಯಲ್ಲಿ ಹಲ್ಲಿಗೆ ಹಲ್ಲು ಕಣ್ಣಿಗೆ ಕಣ್ಣು ನೀತಿ ಮಾತ್ರ ಪಾಕಿಸ್ತಾನಕ್ಕೆ ಅರ್ಥವಾಗುವಂತದ್ದು, ಇನ್ನೊಂದು ಬಾರಿ ಉಗ್ರರನ್ನು ಬಳಸಿ ಪಾಕಿಸ್ತಾನ ಭಾರತೀಯ ನಾಗರೀಕರಿಗೆ ತೊಂದರೆ ನೀಡಿದರೆ ಪಾಕಿಸ್ತಾನವೇ ಇರಬಾರದು ಎಂದರು.
ಜಗತ್ತಿನ ಯಾವುದೇ ದೇಶ ಉಗ್ರಗಾಮಿಗಳಿಗೆ ನೆಲೆ ನೀಡುವ ಸಹಾಯ ಮಾಡಬಾರದು. ಉಗ್ರಗಾಮಿಗಳನ್ನು ಆ ದೇಶ ಮಟ್ಟಹಾಕಿಲ್ಲ ಎಂದರೆ. ಉಗ್ರಗಾಮಿಗಳನ್ನು ಮಟ್ಟಹಾಕುವ ನೇತೃತ್ವ ಭಾರತ ವಹಿಸಬೇಕು ಮತ್ತು ಮಟ್ಟಹಾಕುವ ಕೆಲಸ ಭಾರತ ಮಾಡಬೇಕು ಎಂದರು.
ದೇಶದ ಒಳಗಿದ್ದು ಮತ್ತು ದೇಶದ ಹೊರಗಿದ್ದು ಉಗ್ರಗಾಮಿಗಳಿಗೆ ಬೆಂಬಲ ನೀಡುವವರಿಗೂ ಈಗ ಯಾವ ರೀತಿ ಕ್ರಮಕೈಗೊಂಡಿದೆ, ಅದೇ ರೀತಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಈ ಸರ್ಜಿಕಲ್ ಸ್ಟ್ರೈಕ್ ಸೈನ್ಯದ ಮೇಲೆ ವಿಶ್ವಾಸ ಮೂಡಿಸಿದೆ. ಭಾರತೀಯ ಜನರಲ್ಲಿ ವಿಶ್ವಾಸ ಮೂಡಿಸಿದೆ. ಸೈನ್ಯ ಮತ್ತು ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.







