ಕಲಬುರ್ಗಿ ಹತ್ಯೆ ಪ್ರಕರಣ: ತನಿಖೆಯನ್ನು ಕರ್ನಾಟಕ ಎಸ್‍ಐಟಿಗೆ ಹಸ್ತಾಂತರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಫೆ.26: ಖ್ಯಾತ ಕನ್ನಡ ವಿದ್ವಾಂಸ,ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ(ಸಿಟ್)ಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.
ಎರಡೂ ಕೊಲೆ ಪ್ರಕರಣಗಳ ನಡುವೆ ಸಾಮ್ಯತೆಗಳಿವೆ ಎಂದು ನ್ಯಾಯಮೂರ್ತಿಗಳಾದ ಆರ್‌ಎಫ್ ನಾರಿಮನ್ ಮತ್ತು ವಿನೀತ್ ಸರನ್ ಅವರ ಪೀಠವು ಹೇಳಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು ತನಿಖೆಯ ಉಸ್ತುವಾರಿಯನ್ನು ವಹಿಸಲಿದೆ.
ತನ್ನ ಪತಿಯ ಸಾವಿನ ಕುರಿತು ಸಿಟ್ ತನಿಖೆಯನ್ನು ಕೋರಿ ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಕಲಬುರ್ಗಿ,ಗೌರಿ ಲಂಕೇಶ್ ಹಾಗೂ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆಗಳು ‘ಅತ್ಯಂತ ಗಂಭೀರ ಪ್ರಕರಣ’ದ ಭಾಗವಾಗಿವೆ ಎಂದು ಕಳೆದ ತಿಂಗಳು ವಿಚಾರಣೆ ಸಂದರ್ಭ ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ಪ್ರಕರಣದಲ್ಲಿ ತಮ್ಮ ವಾದಗಳನ್ನು ಪೂರ್ಣಗೊಳಿಸುವಂತೆ ಮತ್ತು ’ಸನ್ನದ್ಧ’ವಾಗಿರುವಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳಿಗೆ ಸೂಚಿಸಿತ್ತು.
ಪನ್ಸಾರೆ ಮತ್ತು ದಾಭೋಲ್ಕರ್ ಅವರ ಹತ್ಯೆಗಳ ಹಿಂದಿದ್ದವರೇ ತನ್ನ ಪತಿಯ ಹತ್ಯೆಯನ್ನೂ ಮಾಡಿದ್ದಾರೆ ಎಂದು ಉಮಾದೇವಿ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.





