ಉಡುಪಿ ಜಿಲ್ಲೆಯಲ್ಲಿ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಪ್ರಮಾಣ ಕಡಿಮೆ: ದಿನಕರ ಬಾಬು

ಉಡುಪಿ, ಫೆ. 26: ಉಡುಪಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ರಕ್ಷಣೆ ಇರುವುದರಿಂದ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕುರಿತು ಜಾಗೃತಿ ಕಾರ್ಯಕ್ರಮಗಳೂ ಹೆಚ್ಚು ಹೆಚ್ಚು ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಇವುಗಳ ಪತ್ತೆ ಪ್ರಕರಣಗಳು ಕಡಿಮೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಸಕ್ಷಮ ಪ್ರಾಧಿಕಾರ ಪಿಸಿಪಿಎನ್‌ಡಿಟಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ) ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭ್ರೂಣಲಿಂಗ ಪತ್ತೆ ಬಗ್ಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ದಿನಕರ ಬಾಬು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಯಿಂದ ಸಮಾಜದಲ್ಲಿ ಲಿಂಗಾನುಪಾತದ ಅಂತರ ಹೆಚ್ಚಾಗುತ್ತದೆ. 2011ರಲ್ಲಿ ಭಾರತದಲ್ಲಿ 1000 ಪುರುಷರಿಗೆ 940 ಮಹಿಳೆಯರ ಲಿಂಗಾನುಪಾತ ಇದ್ದು, ಉಡುಪಿ ಜಿಲ್ಲೆಯಲ್ಲಿ 958 ಇತ್ತು. ಆದರೆ ಕಳೆದ ವರ್ಷ ಜಿಲ್ಲೆಯ ಲಿಂಗಾನುಪಾತ 1000ಕ್ಕೆ940 ಇದ್ದು, ಈ ವರ್ಷ ಅದು 977ಕ್ಕೇರಿದೆ ಎಂದರು.
ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರೆಡ್‌ರೆನ್‌ನಲ್ಲಿ ಇಲ್ಲದಿದ್ದರೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಗಭರ್ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು, ಯಾವುದೇ ಸ್ಕಾನಿಂಗ್ ಸೆಂಟರ್‌ನಲ್ಲಿ ಭ್ರೂಣಲಿಂಗ ಪತ್ತೆಗೆ ಪ್ರಚೋದಿಸುವ ಜಾಹಿರಾತು, ದೇವರ ಪೋಟೋ ಹಾಕಿ ಪರೋಕ್ಷವಾಗಿ ಭ್ರೂಣದ ಕುರಿತು ಮಾಹಿತಿಗಳನ್ನು ನೀಡಬಾರದು ಎಂದರು.
ಯಾವುದೇ ವೈದ್ಯರು ಪ್ರಸವ ಪೂರ್ವ ಭ್ರೂಣಲಿಂಗದ ಮಾಹಿತಿ ನೀಡಿದಲ್ಲಿ, ಮೊದಲನೇ ಬಾರಿ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲಾಗುತ್ತದೆ. 2ನೇ ಬಾರಿ ಭ್ರೂಣಲಿಂಗ ಪತ್ತೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಹಾಗೂ 50,000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ವೈದ್ಯಾಧಿಕಾರಿ ಭ್ರೂಣಲಿಂಗ ಪತ್ತೆಯನ್ನು ಮುಂದುವರಿಸಿದರೆ ಆತನ ನೊಂದಣಿಯನ್ನು ರದ್ದುಪಡಿಸಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲೆಯ ಜಿಲ್ಲಾಧಿಕಾರಿ, ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತಂತೆ ಕ್ರಮ ಕೈಗೊಳ್ಳುವ ಸಕ್ಷಮ ಪ್ರಾಧಿಕಾರಿಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ತಪಾಸಣಾ ಸಮಿತಿ ಮತ್ತು ಜಿಲ್ಲಾ ಸಲಹಾ ಸಮಿತಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತದೆ ಎಂದು ಹೇಳಿದರು.
ಖ್ಯಾತ ಪ್ರಸೂತಿತಜ್ಞರು ಹಾಗೂ ಪಿಸಿಪಿಎನ್‌ಡಿಟಿಯ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರೂ ಆದ ಕೆಎಂಸಿ ಮಣಿಪಾಲದ ವೈದ್ಯ ಡಾ.ಪ್ರತಾಪ್ ಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಬೇಡ ಎನ್ನುವವರಿಗೆ ಹೆಣ್ಣು ಮಕ್ಕಳ ಸಾಧನೆ ಬಗ್ಗೆ ಹೆಚ್ಚು ಹೆಚ್ಚು ತಿಳಿಹೇಳಿ ಜಾಗೃತಿ ಮೂಡಿಸಬೇಕು. ಹೆಣ್ಣು ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ತಿಳಿದರೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಕುರಿತ ಕರಪತ್ರವನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಬಿಡುಗಡೆ ಮಾಡಿದರು.
ಮಣಿಪಾಲ ಸೋನಿಯಾ ಕ್ಲಿನಿಕ್‌ನ ಸ್ತ್ರೀರೋಗತಜ್ಞೆ ಡಾ.ಶುಭಗೀತಾ ಮಾತನಾಡಿ ಆಶಾ ಕಾರ್ಯಕರ್ತೆಯರು ಹೆಣ್ಣು ಮಕ್ಕಳ ಪ್ರಾಧ್ಯಾನ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ಸಮಾನತೆ ಇರಬೇಕು. ಸಮಾಜದಲ್ಲಿ ಶಿಕ್ಷಿತರಿಂದಲೇ ತಪ್ಪುಗಳು ನಡೆಯುತ್ತಿವೆ ಎಂದರು.
ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿ ನ ಸಹ ಪ್ರಾಧ್ಯಾಪಕ ಡಾ.ರಾಜೇಂದ್ರ ಕೆ. ಜಿಲ್ಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಉಡುಪಿ ತಾಲೂಕು ಶಿಶು ಅಭಿವೃಧ್ದಿ ಯೋಜನಾಧಿಕಾರಿ ವೀಣಾ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಸ್ವಾಗತಿಸಿ, ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








