ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಲಿ: ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ
ಉಡುಪಿ, ಫೆ. 26: ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಮಾ.1ರಂದು ಕಾರ್ಮಿಕ ಸಮ್ಮಾನ ದಿನ ಆಚರಣೆ ವಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿದ ಕಾರ್ಮಿಕರ ಸಮ್ಮಾನ ಪ್ರಶಸ್ತಿಗೆ ಕಾರ್ಮಿಕರನ್ನು ಆಯ್ಕೆ ಮಾಡುವ ಸಲುವಾಗಿ, ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿ ಸಭೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 13 ವಲಯ ಅಸಂಘಟಿತ ಕಾರ್ಮಿಕರಿಗೆ ಹಾಗೂ ಕರ್ನಾಟಕ ರಾಜ್ಯ ಖಾಸಗಿ, ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ನೀಡುವ ಪ್ರಶಸ್ತಿಗೆ ಅರ್ಜಿಯನ್ನು ಅಹ್ವಾನಿಸಲಾಗಿದ್ದು, ಒಟ್ಟು 230 ಅರ್ಜಿಗಳು ಬಂದಿವೆ.
ಈ ಅರ್ಜಿಗಳ ಪೈಕಿ ಪ್ರಶಸ್ತಿಗೆ ವಿವಿಧ ವಲಯಗಳಾದ ಕಮ್ಮಾರರಿಂದ 6 ಅರ್ಜಿ, ಹಮಾಲಿಯಿಂದ 5 ಅರ್ಜಿ, ಅಗಸರಿಂದ 9 ಅರ್ಜಿ, ಕುಂಬಾರರಿಂದ 11 ಅರ್ಜಿ, ಮನೆ ಕೆಲಸದವರಿಂದ 12 ಅರ್ಜಿ, ಕಟ್ಟಡ ಕಾರ್ಮಿಕರಿಂದ 31 ಅರ್ಜಿ, ಕ್ಷೌರಿಕರಿಂದ 18 ಅರ್ಜಿ, ತ್ರಿಚಕ್ರ ವಾಹನ ಚಾಲಕರಿಂದ 34 ಅರ್ಜಿ, ನಾಲ್ಕು ಚಕ್ರ ವಾಹನ ಚಾಲಕರಿಂದ 7 ಅರ್ಜಿ, ಟೈಲರ್‌ಗಳಿಂದ 33 ಅರ್ಜಿ, ಅಕ್ಕಸಾಲಿಗರಿಂದ 26 ಅರ್ಜಿಗಳು ಬಂದಿವೆ.
ಸರಕಾರದ ಮಾರ್ಗದರ್ಶನದಂತೆ ವಯಸ್ಸು, ವಿದ್ಯಾಭ್ಯಾಸ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಅರ್ಹ ವ್ಯಕ್ತಿಗಳಿಗೆ ತಲುಪುವಂತಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಹೇಳಿದರು.







