ಪಾಕಿಸ್ತಾನ ಸೇನೆಯ ಪತ್ರಿಕಾಗೋಷ್ಠಿ ಪ್ರಸಾರ: 2 ಸುದ್ದಿ ವಾಹಿನಿಗಳಿಗೆ ಕೇಂದ್ರದಿಂದ ನೋಟಿಸ್

ಹೊಸದಿಲ್ಲಿ, ಫೆ. 26: ಪಾಕಿಸ್ತಾನ ಸೇನೆಯ ವಕ್ತಾರ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿಯನ್ನು ಫೆ. 22ರಂದು ಪ್ರಸಾರ ಮಾಡಿದ ಎರಡು ಟಿ.ವಿ. ವಾಹಿನಿಗಳಿಗೆ ನೋಟಿಸು ಜಾರಿ ಮಾಡಿರುವ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಈ ವಾಹಿನಿಗಳು 1965ರ ಕೇಬಲ್ ನೆಟ್‌ವರ್ಕ್ ಕಾಯ್ದೆ ವಿಧಿಸಿದ ಕಾರ್ಯಕ್ರಮ ನೀತಿ ಉಲ್ಲಂಘಿಸಿದೆ ಎಂದು ಹೇಳಿದೆ.
ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಸಚಿವಾಲಯ ತಿರಂಗ್ ಟಿ.ವಿ. ಹಾಗೂ ಎಬಿಪಿ ನ್ಯೂಸ್‌ಗೆ ನೋಟಿಸು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ವಾಹಿನಿಗಳು ಹಾಗೂ ಖಾಸಗಿ ಟಿ.ವಿ. ಸುದ್ದಿ, ಪ್ರಸಕ್ತ ಸುದ್ದಿಗಳ ಪ್ರಸಾರಕರು ಈ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಮಂದಿ ಯೋಧರು ಹುತಾತ್ಮರಾದ ಬಳಿಕ ಹಿಂಸಾಚಾರವನ್ನು ಉತ್ತೇಜಿಸುವ ಅಥವಾ ರಾಷ್ಟ್ರ ವಿರೋಧಿ ಸುದ್ದಿಗಳನ್ನು ಪ್ರಸಾರ ಮಾಡಿಲ್ಲ ಎಂದು ಖಾತರಿ ನೀಡುವಂತೆ ಸಚಿವಾಲಯ ಎಲ್ಲ ಟಿ.ವಿ. ವಾಹಿನಿಗಳಿಗೆ ಶೋ ಕಾಸ್ ನೋಟೀಸ್ ಜಾರಿ ಮಾಡಿತ್ತು.





