ಅಸ್ಸಾಂ ಕಳ್ಳಭಟ್ಟಿ ದುರಂತ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳ ಬಂಧನ
ರಾಜ್ಯಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

ಗುವಾಹಟಿ,ಫೆ.26: ಗೋಲಾಘಾಟ್ ಮತ್ತು ಜೋರ್ಹಾಟ್ ಜಿಲ್ಲೆಗಳಲ್ಲಿ ಕನಿಷ್ಠ 155 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕಳ್ಳಭಟ್ಟಿ ದುರಂತ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಜೀತು ಸೊನೊವಾಲ್ ಮತ್ತು ಸುನಿಲ್ ಬರುವಾ ಅವರನ್ನು ರವಿವಾರ ಬಕ್ಸಾ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು,ಇವರಿಬ್ಬರೂ ಜೋರ್ಹಾಟ್‌ನ ಬೊರ್ಹೋಲ್ಲಾ ನಿವಾಸಿಗಳಾಗಿದ್ದಾರೆ.
ಇವರಿಬ್ಬರ ಮೇಲೆ ಕೊಲೆ ಆರೋಪವನ್ನು ಹೊರಿಸಲಾಗಿದೆ ಮತ್ತು ಪ್ರಕರಣದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಇತರ ಆರು ಜನರನ್ನು ಬಂಧಿಸಲಾಗಿದೆ ಎಂದು ಜೋರ್ಹಾಟ್ ಎಸ್‌ಪಿ ವೈಭವ ನಿಂಬಾಳ್ಕರ್ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ತನ್ಮಧ್ಯೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಹೊರಡಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು,ನಾಲ್ಕು ವಾರಗಳಲ್ಲಿ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮ ಹಾಗೂ ಸಂತ್ರಸ್ತರು ಮತ್ತು ಅವರ ಅವಲಂಬಿತರಿಗೆ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳು ಇತ್ಯಾದಿ ಸೇರಿದಂತೆ ಸಮಗ್ರ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ನಿರ್ದೇಶ ನೀಡಿದೆ.
ಇಂತಹ ಅಕ್ರಮ ಮದ್ಯ ಪೂರೈಕೆ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿ,ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶವನ್ನು ಹೊರಡಿಸುವಂತೆ ಆಯೋಗವು ಕೇಂದ್ರ ಗೃಹ ಸಚಿವಾಲಯಕ್ಕ್ಕೆ ಸೂಚಿಸಿದೆ.
ಹಲವಾರು ಗುಂಪುಗಳು ಪ್ರತಿಭಟನೆ ನಡೆಸಿ ಸ್ಥಳೀಯ ಸಾರಾಯಿಯನ್ನು ನಿಷೇಧಿಸುವಂತೆ ಮತ್ತು ಕಳ್ಳಭಟ್ಟಿ ಸೇವನೆಯಿಂದ ಮೃತರ ಕುಟುಂಬಗಳಿಗೆ ತಲಾ 2 ಲ.ರೂ.ನಿಂದ 5 ಲ.ರೂವರೆಗೆ ಪರಿಹಾರ ನೀಡುವಂತೆ ಆಗ್ರಹಿಸಿವೆ.







