ಉಗ್ರರ ನೆಲೆಗಳ ಮೇಲೆ ದಾಳಿ: ಕರವೇ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ

ಉಡುಪಿ, ಫೆ.26: ಭಾರತೀಯ ವಾಯುಪಡೆಯ ಯುದ್ದ ವಿಮಾನಗಳು ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯ ಹಿನ್ನೆಲೆಯಲ್ಲಿ ಮಂಗಳವಾರ ಉಡುಪಿಯಲ್ಲಿ ವಿವಿಧ ಸಂಘಟನೆಗಳು ಸಂಭ್ರಮಾಚರಣೆ ನಡೆಸಿದವು.
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ಪಟಾಕಿಯನ್ನು ಸಿಡಿಸಿ, ಸಾರ್ವಜನಿಕರು, ಪ್ರಯಾಣಿಕರಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಮುಖಂಡರಾದ ಸೈಯ್ಯದ್ ನಿಜಾಮ್, ಚಂದ್ರ ಪೂಜಾರಿ, ರಾಘವೇಂದ್ರ ಶೆಟ್ಟಿ, ಶಾಹಿಲ್ ರೆಹಮತುಲ್ಲಾ, ಪ್ರವೀಣ್ ಬಾರ ಕೂರು, ಶಫೀಕ್ ಪಡುಬಿದ್ರೆ, ನಾಸೀರ್ ಯಾಕೂಬ್, ಗ್ಲಾಡ್ಸನ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸಂಭ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ಮುಖಂಡರಾದ ಶ್ಯಾಮಲಾ ಕುಂದರ್, ಜಗದೀಶ್ ಆಚಾರ್ಯ, ನಗರಸಭಾ ಸದಸ್ಯರಾದ ಟಿ.ಜಿ.ಹೆಗಡೆ, ಭಾರತಿ ಪ್ರಶಾಂತ್, ಸವಿತಾ ಹರೀಶ್ ರಾಮ್, ಗೀತಾ ಶೇಟ್, ಸಂತೋಷ್ ಕುಮಾರ್, ಹರೀಶ್ ಪೂಜಾರಿ, ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
ಫೆ.27ರಂದು ಸಂಭ್ರಮಾಚರಣೆ: ಭಾರತದ ವಾಯುಸೇನೆಯು ಪಾಕಿಸ್ಥಾನದ ಉಗ್ರರನ್ನು ನಾಶಗೊಳಿಸಿದ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಫೆ.27ರಂದು ಸಂಜೆ 5:30ಕ್ಕೆ ಉಡುಪಿ ಚಿತ್ತರಂಜನ್ ಸರ್ಕಲ್ ಬಳಿ ವಿಶಿಷ್ಟ ರೀತಿಯಲ್ಲಿ ವಿಜಯೋತ್ಸವ ಸಂಭ್ರಮವನ್ನು ಆಚರಿಸಲಾಗುವುದು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.







