ವಿದ್ಯಾರ್ಥಿಗಳು ಗಾಂಧೀ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲಿ: ವೂಡೇ ಪಿ.ಕೃಷ್ಣ
ಬೆಂಗಳೂರು, ಫೆ.23: ವಿದ್ಯಾರ್ಥಿಗಳು ಗಾಂಧೀ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಭಾಗಿಗಳಾಗಬೇಕೆಂದು ವೂಡೇ ಪಿ.ಕೃಷ್ಣ ತಿಳಿಸಿದರು.
ಮಂಗಳವಾರ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ನಗರದ ಎಸ್‌ಇಎ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧೀಜಿ ತತ್ವ ಹಾಗೂ ಚಿಂತನೆ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಧೀಜಿಯವರು ದೇಶಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟರು. ಭವಿಷ್ಯದ ಭಾರತವನ್ನು ಸರ್ವೋದಯದ ಸಿದ್ಧಾಂತದಡಿ ನಿರ್ಮಿಸುವ ಸಲುವಾಗಿ ಬ್ರಿಟಿಷರ ದುರಾಡಳಿತದ ವಿರುದ್ಧ 142 ದಿನ ಉಪವಾಸ ಸತ್ಯಾಗ್ರಹ ಹಾಗೂ 2329 ದಿನ ಸೆರೆಮನೆ ವಾಸ ಅನುಭವಿಸಿದ್ದರು. ಕೇವಲ ಅವರು ಒಂದು ದೇಶಕ್ಕೆ ಚಿಂತಿಸಿದವರಲ್ಲ. ಇಡೀ ಮನುಕುಲದ ಶಾಂತಿಗಾಗಿ ಶ್ರಮಿಸಿದರು ಎಂದು ಅವರು ಸ್ಮರಿಸಿದರು.
ಮಹಾತ್ಮ ಗಾಂಧೀಜಿ ಬದುಕಿದ ರೀತಿಯನ್ನು ವಿದ್ಯಾರ್ಥಿಗಳು ಅರಿಯಬೇಕು. ಅವರ ಸರಳ ಜೀವನ, ಸತ್ಯ ಹಾಗೂ ಅಹಿಂಸೆಯ ಮೂಲಕ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಗಾಂಧೀಜಿ ತೋರಿಸಿ ಕೊಟ್ಟಿದ್ದಾರೆ. ಗಾಂಧೀಜಿಯ ಚಿಂತನೆಯ ಮಾರ್ಗಗಳು ಕೇವಲ ಭಾರತಕ್ಕೆ ಸೀಮಿತವಲ್ಲ. ಪ್ರಪಂಚವೆ ಅನುಸರಿಸಬೇಕಾದದ್ದೆಂದು ಅವರು ಹೇಳಿದರು.
ಇವತ್ತು ಜಾಗತೀಕರಣ ಹಾಗೂ ಆಧುನಿಕರಣದ ಪ್ರಭಾವಕ್ಕೆ ಒಳಗಾಗಿರುವ ಭಾರತವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಹುತೇಕ ಗ್ರಾಮೀಣ ಭಾಗವನ್ನೆ ಹೊಂದಿರುವ ದೇಶದಲ್ಲಿ ಆಧುನೀಕರಣದ ವಸ್ತುಗಳು ಹಳ್ಳಿಗರ ಬದುಕನ್ನು ನಾಶ ಮಾಡುತ್ತಿದೆ. ಇಂತಹ ಹೊತ್ತಿನಲ್ಲಿ ಗಾಂಧೀಜಿಯ ಚಿಂತನೆಗಳನ್ನು ಸರಿಯಾಗಿ ಗ್ರಹಿಸುವ ಮೂಲಕ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಚಿಂತಕ ಗುರುರಾಜ ಕರ್ಜಗಿ, ಡಾ.ಗಣೇಶ್ ಭಟ್ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.







