ಫೆಡರರ್ ಶುಭಾರಂಭ

ದುಬೈ, ಫೆ.26: ವೃತ್ತಿಜೀವನದ 100ನೇ ಪ್ರಶಸ್ತಿ ಬೇಟೆಯಲ್ಲಿರುವ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಸೋಮವಾರ ನಡೆದ ದುಬೈ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಜಯ ಸಾಧಿಸಿ ಶುಭಾರಂಭ ಮಾಡಿದ್ದಾರೆ.
ಎರಡನೇ ಶ್ರೇಯಾಂಕದ ಫೆಡರರ್ ಏವಿಯೇಶನ್ ಕ್ಲಬ್‌ನಲ್ಲಿ ಸುಮಾರು 5,500ರಷ್ಟಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಹ್ಲ್‌ಶ್ರೈಬರ್‌ರನ್ನು 6-4, 3-6, 6-1 ಸೆಟ್‌ಗಳ ಅಂತರದಿಂದ ಮಣಿಸಿದರು.
ಏಳು ಬಾರಿ ದುಬೈ ಚಾಂಪಿಯನ್ ಆಗಿರುವ ಫೆಡರರ್ ಎರಡನೇ ಸುತ್ತಿನ ಪಂದ್ಯದಲ್ಲಿ ಫೆರ್ನಾಂಡೊ ವೆರ್ಡಾಸ್ಕೊರನ್ನು ಎದುರಿಸಲಿದ್ದಾರೆ.
‘‘ಇಲ್ಲಿನ ಪ್ರತಿಕೂಲ ವಾತಾವರಣದಲ್ಲಿ ಪ್ರಬಲ ಹೋರಾಟ ನೀಡಿದ ಜರ್ಮನಿಯ ಫಿಲಿಪ್ ವಿರುದ್ಧ ಜಯ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ’’ ಎಂದು 20 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ಪ್ರತಿಕ್ರಿಯಿಸಿದ್ದಾರೆ.
ಫೆಡರರ್ ತನ್ನ ಸ್ನೇಹಿತ ಹಾಗೂ ಪ್ರಾಕ್ಟೀಸ್ ಪಾರ್ಟ್ನರ್ ಫಿಲಿಪ್ ವಿರುದ್ಧ ಸತತ 14ನೇ ಪಂದ್ಯವನ್ನು ಗೆದ್ದುಕೊಂಡು ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.





