ಮೊದಲ ದಿನ ಭಾರತ ಮೇಲುಗೈ
ಯೂತ್ ಟೆಸ್ಟ್ ಸ್ಪಿನ್ನರ್ ಮನಿಷಿಗೆ 5 ವಿಕೆಟ್

ತಿರುವನಂತಪುರ, ಫೆ.26: ಎಡಗೈ ಸ್ಪಿನ್ನರ್ ಮನಿಷಿ ಅವರ 5 ವಿಕೆಟ್ ಗೊಂಚಲು ನೆರವಿನಿಂದ ಭಾರತ ಅಂಡರ್-19 ಪುರುಷರ ತಂಡ ದ.ಆಫ್ರಿಕ ಅಂಡರ್-19 ತಂಡದ ವಿರುದ್ಧ ಇಲ್ಲಿ ಆರಂಭವಾದ ದ್ವಿತೀಯ ಯೂತ್ ಟೆಸ್ಟ್‌ನಲ್ಲಿ ಮೊದಲ ದಿನದ ಗೌರವ ಪಡೆದಿದೆ.
ಮನಿಷಿ ಅಮೋಘ ಬೌಲಿಂಗ್(58ಕ್ಕೆ 5) ನೆರವಿನಿಂದ ಭಾರತ ತಂಡ ದ.ಆಫ್ರಿಕವನ್ನು ಪ್ರಥಮ ಇನಿಂಗ್ಸ್‌ನಲ್ಲಿ 54.5 ಓವರ್‌ಗಳಲ್ಲಿ 152 ರನ್‌ಗಳಿಗೆ ನಿಯಂತ್ರಿಸಿತು. ಉತ್ತರವಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿರುವ ಭಾರತ, ಯಶಸ್ವಿ ಜೈಸ್ವಾಲ್ ಅವರ ಅಜೇಯ ಅರ್ಧಶತಕದ (81) ನೆರವಿನಿಂದ 112 ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.
ದ.ಆಫ್ರಿಕ ಪರ ಅರ್ಧಶತಕಗಳನ್ನು ಗಳಿಸಿ ಮಿಂಚಿದ ಆರಂಭಿಕ ಆಟಗಾರ ರುವಾನ್ ಟರ್ಬಲಾಂಚೆ (51) ಹಾಗೂ ಬ್ರೈಸ್ ಪರ್ಸನ್ಸ್(64) ತಮ್ಮ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ತಡೆದರು.
ಒಂದು ಹಂತದಲ್ಲಿ 121ಕ್ಕೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಫ್ರಿಕ ತಂಡ ಮನಿಷಿ ಹಾಗೂ ಶೋಕಿನ್ ಬೌಲಿಂಗ್ ದಾಳಿಗೆ ತತ್ತರಿಸಿ 139 ರನ್ ಆಗುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಆಫ್ರಿಕ ದಾಂಡಿಗ ಪರ್ಸನ್ಸ್ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಶೋಕಿನ್ ಎರಡು ವಿಕೆಟ್ ಪಡೆದರು.
ಭಾರತ ತಂಡದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವತ್ಸಲ್ ಗೋವಿಂದ್(25) ಉತ್ತಮ ಆಟವಾಡಿದರು.







