ವಾಯುಪಡೆಯ ಪೈಲಟ್ ಪಾಕಿಸ್ತಾನದ ವಶದಲ್ಲಿದ್ದಾರೆ: ದೃಢಪಡಿಸಿದ ಭಾರತ

ಹೊಸದಿಲ್ಲಿ, ಫೆ.27: ಭಾರತದ ವಾಯುಸೀಮೆಯೊಳಗೆ ಪ್ರವೇಶಿಸಲು ಯತ್ನಿಸಿದ ಪಾಕಿಸ್ತಾನದ ಯುದ್ಧ ವಿಮಾನ ಹೊಡೆದುರುಳಿಸುವ ಕಾರ್ಯಾಚರಣೆ ವೇಳೆ ಪತನಗೊಂಡ ಮಿಗ್-21 ಯುದ್ಧ ವಿಮಾನದ ಓರ್ವ ಪೈಲಟ್ ಪಾಕಿಸ್ತಾನದ ವಶದಲ್ಲಿದ್ದಾರೆ ಎಂದು ಕೇಂದ್ರ ಸರಕಾರ ದೃಢಪಡಿಸಿದೆ.
ಮಿಗ್ ವಿಮಾನದ ಓರ್ವ ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಇಂದು ಮಧ್ಯಾಹ್ನ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿತ್ತು.
ತಾನು ಭಾರತದ ಓರ್ವ ಪೈಲಟ್‌ನನ್ನು ಹಿಡಿದಿರುವುದಾಗಿ ಹೇಳಿಕೊಂಡಿದ್ದ ಪಾಕಿಸ್ತಾನ, ಸಮವಸ್ತ್ರದಲ್ಲಿ, ಕಣ್ಣು ಮುಚ್ಚಿದ ಹಾಗೂ ಗಾಯಗೊಂಡಿದ್ದ ವ್ಯಕ್ತಿಯ ವಿಡಿಯೋವನ್ನು ಬಿಡುಗಡೆ ಮಾಡಿತ್ತು.
ಭಾರತೀಯ ವಾಯು ಪಡೆಯ ಗಾಯಾಳು ಸಿಬ್ಬಂದಿಯನ್ನು ಅಸಭ್ಯ, ಕೀಳುಮಟ್ಟದಲ್ಲಿ ಪ್ರದರ್ಶಿಸುತ್ತಿರುವ ಪಾಕಿಸ್ತಾನವನ್ನು ಬಲವಾಗಿ ಖಂಡಿಸಿರುವ ಭಾರತ, ಪಾಕ್ ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನು ಹಾಗೂ ಜಿನೇವಾ ಒಪ್ಪಂದದ ಎಲ್ಲ ನಿಯಮಗಳನ್ನು ಉಲ್ಲಂಘಿಸಿದೆ. ಒಪ್ಪಂದ ಪ್ರಕಾರ ತನ್ನ ವಶದಲ್ಲಿರುವ ಭಾರತೀಯ ರಕ್ಷಣಾ ಸಿಬ್ಬಂದಿಗೆ ಪಾಕ್ ಯಾವುದೇ ತೊಂದರೆ ನೀಡಬಾರದು. ನಮ್ಮ ಪೈಲಟ್ ಶೀಘ್ರವೇ ಹಾಗೂ ಸುರಕ್ಷಿತವಾಗಿ ವಾಪಾಸು ಬರುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ತನ್ನ ವಶದಲ್ಲಿ ಭಾರತದ ಓರ್ವ ಪೈಲಟ್ ಮಾತ್ರ ಇದ್ದಾರೆ ಎಂದು ಇದೇ ವೇಳೆ ಪಾಕಿಸ್ತಾನ ಸ್ಪಷ್ಟಪಡಿಸಿದೆ.







