ಪ್ರತಿಭಾ ವಿಕಸನಕ್ಕೆ ರಂಗಕಲೆ ಪೂರಕ: ಬಿ.ಎನ್.ಶಂಕರ ಪೂಜಾರಿ

ಉಡುಪಿ, ಫೆ.27: ಪ್ರತಿಯೊಬ್ಬರಲ್ಲೂ ವಿಶೇಷವಾದ ಸಾಮರ್ಥ್ಯ ಇರುತ್ತದೆ. ಸರಿಯಾದ ಅವಕಾಶಗಳು ಸಿಕ್ಕಿದಾಗ ಮಾತ್ರ ಅದು ವೌಲ್ಯ ಪಡೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ರಂಗಕಲೆಯೂ ಸಾಕಷ್ಟು ಪ್ರತಿಭೆಗಳು ಮುಖ್ಯವಾಹಿನಿಗೆ ಬರು ವಂತೆ ಮಾಡುತ್ತದೆ ಎಂದು ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಹೇಳಿದ್ದಾರೆ.
ಉಡುಪಿ ಭುಜಂಗ ಪಾರ್ಕ್‌ನ ಬಯಲು ರಂಗ ಮಂದಿರದಲ್ಲಿ ಸುಮನಸಾ ಕೊಡವೂರು ರಂಗಹಬ್ಬ-7ರ ಎರಡನೆ ದಿನವಾದ ಮಂಗಳವಾರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಹಿರಿಯ ರಂಗನಟಿ ಮಾಧವಿ ಭಂಡಾರಿ ಮಾತ ನಾಡಿ, ಸರಿ ತಪ್ಪುಗಳನ್ನು ತಿಳಿಸುವುದರೊಂದಿಗೆ ಸಮಾಜವನ್ನು ತಿದ್ದುವ ಕಾಯಕ ನಾಟಕರಂಗದಿಂದ ಆಗುತ್ತಿದೆ. ಎಲ್ಲ ಸಾಂಸ್ಕೃತಿಕ ಪ್ರಕಾರಗಳು ಪರಸ್ಪರ ಅನ್ಯೋನ್ಯತೆಗೆ ಕಾರಣವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ನಗರಸಭಾ ಸದಸ್ಯ ಶ್ರೀಶ ಭಟ್ ಕೊಡವೂರು, ಉಡುಪಿ ರಂಗಭೂಮಿ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಉಪ ಪ್ರಾಂಶುಪಾಲ ಕರುಣಾಕರ್ ಮಲ್ಪೆ, ನ್ಯಾಯವಾದಿ ಅನಿಲ್ ಕುಮಾರ್, ರಂಗ ಕಲಾವಿದೆ ಪುಷ್ಪ ಶಶಿಧರ್, ಪ್ರಗತಿಪರ ಕೃಷಿಕ ಮುದ್ದು ಅಣ್ಣಪ್ಪ ಶೆಟ್ಟಿ, ಸುಮನಸಾದ ಅಧ್ಯಕ್ಷ ಪ್ರಕಾ್ ಜಿ.ಕೊಡವೂರು ಉಪಸ್ಥಿತರಿದ್ದರು.
ಹಿರಿಯ ನಾಟಕಕಾರ ಮುಂಬೈಯ ನಂದಳಿಕೆ ನಾರಾಯಣ ಶೆಟ್ಟಿ ಅವರನ್ನು ರಂಗ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು. ಸುಮನಸಾ ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು ಸ್ವಾಗತಿಸಿದರು. ಪ್ರಜ್ಞಾಶ್ರೀ ವಂದಿಸಿದರು. ಪ್ರವೀಣ್ ಚಂದ್ರ ತೋನ್ಸೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ಕೊಡವೂರು ತಂಡದಿಂದ ಅವ್ವ ನಾಟಕ ಪ್ರದರ್ಶನಗೊಂಡಿತು.







