ಮಂಡ್ಯ ಜಿಲ್ಲೆಗೆ ಅಂಬರೀಷ್ ಕೊಡುಗೆ ಶೂನ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ, ಫೆ.27: ನಟ ಅಂಬರೀಷ್ ಕೇಂದ್ರ, ರಾಜ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದರೂ ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಅವರ ಕೊಡುಗೆ ಶೂನ್ಯವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ 5 ಸಾವಿರ ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಅಮೃತ ಮಹೋತ್ಸವವನ್ನು ಅಂಬರೀಷ್ ನೇತೃತ್ವದಲ್ಲಿ ಆಚರಿಸಲಾಯಿತು. ಆಗ ನನ್ನನ್ನೂ ಆಹ್ವಾನಿಸಲಾಗಿತ್ತು. ರಸ ಮಂಜರಿ ಕಾರ್ಯಕ್ರಮವಾಗಿದ್ದಷ್ಟೇ ಅವರ ಹೆಗ್ಗಳಿಕೆ ಎಂದು ವ್ಯಂಗ್ಯವಾಡಿದರು.
ಅಂಬರೀಷ್ ಅವರ ಬಗ್ಗೆ ನನಗೂ ಅಭಿಮಾನವಿದೆ. ಅದಕ್ಕಿಂತಲೂ ಮಿಗಿಲಾಗಿ ಜಿಲ್ಲೆಯ ಜನರ ಅಭಿಮಾನದ ಕಾರಣಕ್ಕೇ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರುವ ಕೆಲಸ ಮಾಡಿದೆ. ನಾನು ಅವರ ಪಾರ್ಥೀವ ಶರೀರವನ್ನು ತರದಿದ್ದರೆ ಅಭಿಮಾನಿಗಳಿಗೆ ಅಂತಿಮ ದರ್ಶನದ ಅವಕಾಶ ದೊರೆಯುತ್ತಿತ್ತೆ ಎಂದು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಅಂಬರೀಷ್ ಶವವನ್ನು ಅವರ ಸ್ವಂತ ಜಿಲ್ಲೆಗೆ ತರಬಾರದೆಂದು ಒತ್ತಾಯಿಸಿದವರೇ ಈಗ ಈ ಜಿಲ್ಲೆಯ ಮಣ್ಣಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಆ ದೇವರಿಗೇ ಬಿಡುತ್ತೇನೆ. ಇವತ್ತು ನನ್ನ ಕುಟುಂಬವನ್ನು ಬೀದಿಗೆ ಎಳೆದಿದ್ದಾರೆ. ನಾನು ನನ್ನ ಮಗನನ್ನು ಚುನಾವಣೆಗೆ ನಿಲ್ಲಸುತ್ತೇನೆಂದು ಎಲ್ಲಿಯಾದರು ಚರ್ಚೆ ಮಾಡಿದ್ದೇನೆಯೇ ? ನನಗೆ ನಿಮ್ಮ ಪ್ರೀತಿ ಮುಖ್ಯ, ಸ್ಥಾನಮಾನ ಅಲ್ಲ ಎಂದರು.







