ಪರಿಶಿಷ್ಟ ನೌಕರರ ಭಡ್ತಿ ಮೀಸಲು ಕಾಯ್ದೆ ಜಾರಿಗೆ ಸರಕಾರ ಅಧಿಕೃತ ಆದೇಶ

ಬೆಂಗಳೂರು, ಫೆ. 27: ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ಪಂಗಡದ ನೌಕರರ ಭಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನ ಸಂಬಂಧ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರಕಾರದ ಆದೇಶದಿಂದ ಹಿಂಭಡ್ತಿಗೆ ಗುರಿಯಾಗಿದ್ದ ಎಸ್ಸಿ-ಎಸ್ಟಿ ನೌಕರರು ನಿರಾಳರಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ, ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದಂತಾಗಿದೆ.
ಭಡ್ತಿ ಮೀಸಲಾತಿ ಕಾಯ್ದೆ 2002 ಅನ್ನು ಸುಪ್ರೀಂ ಕೋರ್ಟ್ 2017 ಫೆ.9ರಂದು ರದ್ದು ಮಾಡಿತ್ತು. ಹೀಗಾಗಿ 3,700ಕ್ಕೂ ಹೆಚ್ಚು ಎಸ್ಸಿ-ಎಸ್ಟಿ ನೌಕರರು ಹಿಂಭಡ್ತಿಗೆ ಒಳಗಾಗಿದ್ದರು. ಈ ನೌಕರರ ಹಿತರಕ್ಷಣೆಗೆ ರಾಜ್ಯ ಸರಕಾರ ಭಡ್ತಿ ಮೀಸಲಾತಿ ಕಾಯ್ದೆಯನ್ನು ರೂಪಿಸಿತ್ತು. ಇದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಜ.30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಕಾಯ್ದೆ ಜಾರಿ ಸಂಬಂಧ ಸರಕಾರ ಯಾವುದೇ ಆದೇಶ ಹೊರಬಿದ್ದಿರಲಿಲ್ಲ, ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಆತಂಕಕ್ಕೆ ಒಳಗಾಗಿದ್ದರು.
ಫೆ.25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಸಂಪುಟ ಒಪ್ಪಿಗೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಹಿಂಭಡ್ತಿಗೊಂಡವರನ್ನು ತಕ್ಷಣ ಮರುನೇಮಕ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ.
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದ್ದು, ಆದೇಶ ಪಾಲಿಸದಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನಿರ್ದೇಶನ ನೀಡಲಾಗಿದೆ. ಜತೆಗೆ ಈ ಆದೇಶವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟನೆ ನೀಡಲಾಗಿದೆ.







