ಹಿರಿಯ ಪ್ರತಿಪಕ್ಷ ನಾಯಕರ ತುರ್ತುಸಭೆ

ಹೊಸದಿಲ್ಲಿ,ಫೆ.27: ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶೆ ಮುಹಮ್ಮದ್‌ನ ಭಯೋತ್ಪಾಕ ಶಿಬಿರದ ಮೇಲೆ ಭಾರತೀಯ ವಾಯುಪಡೆಯ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಹಿರಿಯ ಪ್ರತಿಪಕ್ಷ ನಾಯಕರು ಬುಧವಾರ ಸಂಸತ್ ಭವನದಲ್ಲಿ ತುರ್ತುಸಭೆಯನ್ನು ನಡೆಸಿದರು. ಬೆಳಿಗ್ಗೆ ಪಾಕಿಸ್ತಾನದ ಯುದ್ಧವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು,ಅದರ ಎಫ್-16 ವಿಮಾನವನ್ನು ಭಾರತೀಯ ವಾಯುಪಡೆಯು ಹೊಡೆದುರುಳಿಸಿದೆ. ಇದೇ ವೇಳೆ ತಾನು ಭಾರತದ ಎರಡು ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನವು ಹೇಳಿಕೊಂಡಿದೆ.
ಪ್ರಧಾನಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಭದ್ರತಾ ಸಭೆಯ ಬೆನ್ನಿಗೇ ಪ್ರತಿಪಕ್ಷಗಳ ತುರ್ತುಸಭೆ ನಡೆದಿದ್ದು,ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್,ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು,ಎನ್‌ಸಿಪಿ ನಾಯಕ ಶರದ್ ಪವಾರ್,ಜೆಎಂಎಂ ನಾಯಕ ಶಿಬು ಸೊರೇನ್,ಬಿಎಸ್‌ಪಿ ನಾಯಕ ಎಸ್.ಸಿ.ಮಿಶ್ರಾ,ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಟಿಎಂಸಿ ಪಕ್ಷದ ನಾಯಕ ಡೆರೆಕ್ ಒಬ್ರಿಯಾನ್,ಶರದ ಯಾದವ ಮತ್ತು ಆಪ್ ನಾಯಕ ಸಂಜಯ ಸಿಂಗ್ ಸೇರಿದಂತೆ ಹಲವಾರು ಪ್ರತಿಪಕ್ಷ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಗುರುವಾರ ನಡೆಯಲಿದ್ದ ತನ್ನ ಕಾರ್ಯಕಾರಿ ಸಮಿತಿಯ ಸಭೆಯನ್ನು ರದ್ದುಗೊಳಿಸಿದೆ.







