ಮೋದಿ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟದ ಬೆದರಿಕೆ: ಬಿಹಾರದ ವ್ಯಕ್ತಿಯ ಬಂಧನ

ಪಾಟ್ನಾ, ಫೆ. 27: ಮಾರ್ಚ್ 3ರಂದು ಇಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಸ್ಫೋಟ ನಡೆಸಲಾಗುವುದು ಎಂಬ ವ್ಯಾಟ್ಸ್ ಆ್ಯಪ್ ಸಂದೇಶ ರವಾನಿಸಿದ ಬಿಹಾರ ಪಾಟ್ನಾದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ರವಿವಾರ ನಡೆಯಲಿರುವ ಎನ್‌ಡಿಎಯ ಸಂಕಲ್ಪ ರ‍್ಯಾಲಿಯ ಸಂದರ್ಭ ಸ್ಫೋಟ ನಡೆಸಲಾಗುವುದು ಎಂದು ಬೆದರಿಕೆ ಒಡ್ಡಿದ ಬಳಿಕ ಪಾಟ್ನಾದ ನಿವಾಸಿ ಹಾಗೂ ಸ್ವಘೋಷಿತ ಸಾಮಾಜಿಕ ಕಾರ್ಯಕರ್ತ ಉದಯಾನ್ ರಾಯ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಹಾಗೂ ವದಂತಿ ಹಬ್ಬಿಸಿದ ಆರೋಪದಲ್ಲಿ ರಾಯ್ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಲ ಪ್ರದರ್ಶಿಸಲು ಎನ್‌ಡಿಎ ಮಾರ್ಚ್ 3ರಂದು ಪಾಟ್ನಾದಲ್ಲಿ ಸಂಕಲ್ಪ ರ‍್ಯಾಲಿ ಆಯೋಜಿಸಿದೆ.
ರ‍್ಯಾಲಿಯ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.





