ವಾಯುದಾಳಿಯ ರಾಜಕೀಕರಣ: ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ

ಹೊಸದಿಲ್ಲಿ,ಫೆ.27: ಸಶಸ್ತ್ರ ಪಡೆಗಳ ತ್ಯಾಗವನ್ನು ರಾಜಕೀಕರಣಗೊಳಿಸುತ್ತಿರುವ ಆಡಳಿತಾರೂಡ ಬಿಜೆಪಿ ವಿರುದ್ಧ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಬುಧವಾರ ಸಂಸತ್‌ನಲ್ಲಿ ಸಭೆಯಲ್ಲಿ ಭಾಗಿಯಾದ 21 ರಾಜಕೀಯ ಪಕ್ಷಗಳ ನಾಯಕರು ನೀಡಿದ ಜಂಟಿ ಹೇಳಿಕೆಯಲ್ಲಿ ಪುಲ್ವಾಮ ಆತ್ಮಹತ್ಯಾ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಗಡಿಯಾಚೆಗಿನ ಉಗ್ರರ ಶಿಬಿರದ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಪಡೆಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಈ ವಿಷಯವನ್ನು ರಾಜಕೀಕರಣಗೊಳಿಸುತ್ತಿರುವ ಕೇಂದ್ರ ಸರಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಎನ್ನುವುದು ಸಂಕುಚಿತ ರಾಜಕೀಯ ಮನೋಭಾವದಿಂದ ಪ್ರತ್ಯೇಕವಾಗಿರಬೇಕು ಎಂದು ತಿಳಿಸಿರುವ ನಾಯಕರು, ನಮ್ಮ ಪ್ರಜಾಪ್ರಭುತ್ವದ ಸಂಪ್ರದಾಯದಂತೆ ಈ ಸಂದರ್ಭದಲ್ಲಿ ಸರ್ವಪಕ್ಷಗಳ ಸಭೆ ಕರೆಯುವ ಗೋಜಿಗೂ ಪ್ರಧಾನಿ ಮೋದಿ ಹೋಗದಿರುವುದು ದುರದೃಷ್ಟಕರ ಎಂದು ಅಭಿಪ್ರಾಯಿಸಿದ್ದಾರೆ. ಬುಧವಾರ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳು ಉಭಯ ರಾಷ್ಟ್ರಗಳ ಯುದ್ಧವಿಮಾನಗಳನ್ನು ಹೊಡೆದುರುಳಿಸಿದ ಬಗ್ಗೆ ಹೇಳಿಕೆ ನೀಡಿದ ನಂತರ ಭದ್ರತಾ ಪರಿಸ್ಥಿತಿ ಮತ್ತು ನಾಪತ್ತೆಯಾಗಿರುವ ವಾಯುಪಡೆಯ ಪೈಲಟ್‌ನ ಸುರಕ್ಷತೆಯ ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಪಾಕಿಸ್ತಾನದ ಸ್ವಾಧೀನದಲ್ಲಿದ್ದಾರೆ ಎನ್ನಲಾಗಿರುವ ಭಾರತೀಯ ವಾಯುಪಡೆಯ ಪೈಲಟನ್ನು ಸುರಕ್ಷಿತವಾಗಿ ಕರೆತರುವಂತೆ ಸರಕಾರಕ್ಕೆ ಕಾಂಗ್ರೆಸ್ ಮನವಿ ಮಾಡಿದೆ. ಜೊತೆಗೆ ದ್ವೇಷ ಮತ್ತು ಸುಳ್ಳು ಸುದ್ದಿಗಳಿಗೆ ಸುಲಭವಾಗಿ ತುತ್ತಾಗಬಹುದಾದ ಈ ಸಂದರ್ಭದಲ್ಲಿ ಸುದ್ದಿಗಳನ್ನು ಹಂಚುವ ಮತ್ತು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಿವೇಚನೆಯಿಂದ ವರ್ತಿಸುವಂತೆ ಪಕ್ಷ ಮನವಿ ಮಾಡಿದೆ.





