ಮಹಾತ್ಮ ಗಾಂಧೀಜಿ 150ನೇ ಜನ್ಮದಿನ: ಯುರೋ ಬ್ಯಾಂಕಿನಿಂದ ನೋಟು ಬಿಡುಗಡೆ

ಬೆಂಗಳೂರು, ಫೆ. 27: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೆ ಜನ್ಮದಿನದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಯುರೊ ಸಂಸ್ಮರಣಾ ಬ್ಯಾಂಕ್ ಹೊಸ ನೋಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ನಿಯಮಿತ ಆವೃತ್ತಿಯ ಝಿರೋ ಯುರೊನ 12 ನೋಟುಗಳ ಸಂಸ್ಮರಣಾ ಸರಣಿಯನ್ನು ಯುಎಇ ಮೂಲದ ವಿಶೇಷ ನ್ಯೂಮಿಸ್‌ಮ್ಯಾಟಿಕ್ಸ್ ಕಂಪೆನಿಯಾದ ನ್ಯೂಮಿಸ್‌ಬಿಂಗ್ ಬಿಡುಗಡೆ ಮಾಡುತ್ತಿದ್ದು, ಪ್ರತಿ ವಿನ್ಯಾಸದಲ್ಲಿ ಕೇವಲ 5 ಸಾವಿರ ನೋಟುಗಳು ಮಾತ್ರ ಇರುತ್ತವೆ.
ಈ ಸರಣಿಯ ಮೊದಲ 2 ನೋಟುಗಳನ್ನು ಈಗ ಬಿಡುಗಡೆ ಮಾಡಲಾಗುತ್ತಿದ್ದು, ಉಳಿದವುಗಳನ್ನು 2019ರ ಅಕ್ಟೋಬರ್ 2ರ ವರೆಗೆ ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು. ಈ ನೋಟುಗಳನ್ನು ಗಾಂಧೀಜಿಯವರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ದುಬಾಯ್ ಮೂಲದ ಭಾರತೀಯ ಕಲಾವಿದ ಅಕ್ಬರ್ ಸಾಹೇಬ್ ವಿನ್ಯಾಸಗೊಳಿಸಿರುತ್ತಾರೆ.
ಅಂತರ್‌ರ್ಟ್ರೋಯ ಬ್ಯಾಂಕ್ ನೋಟ್ ಸೊಸೈಟಿ ದುಬೈ ಚಾಪ್ಟರ್‌ನ ಅಧ್ಯಕ್ಷರಾದ ರಾಮ್ ಕುಮಾರ್, ಈ ಸಂಸ್ಮರಣಾ ನೋಟುಗಳು ಅಪಾರ ಶೆಲ್ಫ್ ಮೌಲ್ಯ ಹೊಂದಿದ್ದು, ಮಹಾತ್ಮಾಗಾಂಧೀಜಿಯವರ ಜೀವನದ ಐತಿಹಾಸಿಕ ಘಟನೆಗಳನ್ನು ನೆನಪಿಸುತ್ತದೆ ಎಂದರು.
ಈ ನೋಟುಗಳಲ್ಲಿ ಒಂದು ಮೋಹನ್ ದಾಸ್ ಕರಂಚಂದ್ ಗಾಂಧಿ ಅವರು ತಮ್ಮ ತಾಯಿಗೆ ನೀಡಿದ ಮೂರು ಪ್ರಮಾಣಗಳ ಘಟನೆ ಮತ್ತು 2ನೆಯದು ದಕ್ಷಿಣ ಆಫ್ರಿಕಾದಲ್ಲಿ 1893ರಲ್ಲಿ ಮಹಾತ್ಮಾಗಾಂಧಿಯವರನ್ನು ರೈಲಿನಿಂದ ಹೊರಹಾಕಿದ ಘಟನೆಗಳನ್ನು ಬಿಂಬಿಸುತ್ತವೆ. ನೋಟು ಸಂಗ್ರಹಿಸುವವರಿಗೆ ಇವು ವಿಶೇಷ ಆಕರ್ಷಣೆ ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.







