ನಾಡದೋಣಿ ಹೆಸರಿನಲ್ಲಿ ಯಾಂತ್ರಿಕೃತ ಮೀನುಗಾರಿಕೆ: ಕ್ರಮಕ್ಕೆ ಆಗ್ರಹಿಸಿ ಮನವಿ

ಮಲ್ಪೆ, ಫೆ.27: ನಾಡದೋಣಿ ಮೀನುಗಾರಿಕೆ ಹೆಸರಿನಲ್ಲಿ ಅಕ್ರಮವಾಗಿ ಯಾಂತ್ರಿಕೃತ ಮೀನುಗಾರಿಕೆ ನಡೆಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘವು ಬುಧವಾರ ಮಲ್ಪೆ ಮೀನುಗಾರಿಕಾ ಉಪನಿರ್ದೇಶಕ ಪಾರ್ವ್ನಾಥ್ ಅವರಿಗೆ ಮನವಿ ಸಲ್ಲಿಸಿತು.
ಅಖಿಲ ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಗುರುದಾಸ್ ಬಂಗೇರ ಮಾತನಾಡಿ, ಸಾಂಪ್ರದಾಯಿಕ ನಾಡದೋಣಿಯ ಹೆಸರಿನಲ್ಲಿ ಅಕ್ರಮ ವಾಗಿ ಯಾಂತ್ರಿಕೃತ ಮೀನುಗಾರಿಕೆಯನ್ನು ಮಾಡುತ್ತಿರುವವರ ವಿರುದ್ಧ ಈವರೆಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಐದು ದಿನಗಳೊಳಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದಲ್ಲಿ ತಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಮೋಟಾರಿಕೃತ ದೋಣಿ ಎಂದು ನಮೂದಿಸಿ ವಿವಿಧ ರೀತಿಯ ಬಲೆಗಳನ್ನು ಉಪಯೋಗಿಸಿ ಯಾಂತ್ರಿಕೃತ ಮೀನುಗಾರಿಕೆ ನಡೆಸಲಾಗುತ್ತಿದೆ. 25ರಿಂದ 40 ಅಶ್ವಶಕ್ತಿಯ ಎರಡೆರಡು ಎಂಜಿನ್ ಬಳಸಿ ಮಳೆಗಾಲದಲ್ಲಿಯೂ ಮೀನುಗಾರಿಕೆ ಯನ್ನು ನಡೆಸಲಾಗುತ್ತಿದೆ. ಗಿಲ್‌ನೆಟ್ ಬಲೆ ಉಪಯೋಗಿಸುವ ಅನುಮತಿ ಪಡೆದು ಟ್ರಾಲ್ ಬಲೆಗಳನ್ನು ಉಪಯೋಗಿಸಿ ಬುಲ್ ಟ್ರಾಲಿಂಗ್ ನಡೆಸ ಲಾಗುತ್ತಿದೆ ಎಂದು ಅವರು ದೂರಿದರು.
ನಾಡದೋಣಿಗಳಿಗೆ ಸಿಗುವ ಸೀಮೆ ಎಣ್ಣೆಯಲ್ಲಿ ಶೇ.30ರಷ್ಟು ಮಾತ್ರ ನೈಜ ಮೀನುಗಾರರಿಗೆ ಸಿಗುತ್ತಿದೆ. ಉಳಿದಂತೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ರೀತಿಯಲ್ಲಿ ಸರಕಾರದ ಬೊಕ್ಕಸಕ್ಕೆ ಉಂಟಾಗುವ ಅರ್ಥಿಕ ನಷ್ಟವನ್ನು ತಪ್ಪಿಸಿ, ಸರಕಾರದ ಯೋಜನೆಗಳು ನೈಜ್ಯ ಮೀನುಗಾರರಿಗೆ ಸಿಗುವಂತಾಗೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್, ಮುಖಂಡರಾದ ನವೀನ್ ಕೋಟ್ಯಾನ್, ರಾಮ ಸುವರ್ಣ, ನವೀನ್ ಸುವರ್ಣ, ಮಧು ಕರ್ಕೇರ, ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.







