ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ, ದಂಡ
ಉಡುಪಿ, ಫೆ.27: ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಆರೋಪಿಯಾದ ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲಕಿನ ಇಲಕರ್ ನಿವಾಸಿ ಶ್ರೀನಿವಾಸ ಬಿ.ಎಸ್. ಎಂಬವರು ಪಿರ್ಯಾದಿದಾರರಾದ ಜಿಲ್ಲೆಯ ಯಡ್ತಾಡಿ ಗ್ರಾಮದ ಸಾಬರಕಟ್ಟೆ ನಿವಾಸಿ ಸುರೇಂದ್ರ ಶೆಟ್ಟಿ ಎಂಬವರಿಗೆ ಎಂಟು ಲಕ್ಷ ರೂ.ಪರಿಹಾರ, ಸರಕಾರಕ್ಕೆ 5000ರೂ. ದಂಡ ಪಾವತಿಯಂದಿಗೆ ಆರು ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ರಾಮಪ್ರಶಾಂತ್ ಎಂ.ಎನ್. ತೀರ್ಪು ನೀಡಿದ್ದಾರೆ.
ಪಿರ್ಯಾಧಿದಾರರಾದ ಸುರೇಂದ್ರ ಶೆಟ್ಟಿ ಅವರಿಗೆ ಆರೋಪಿ ಶ್ರೀನಿವಾಸ ಬಿ.ಎಸ್. ಕಾನೂನುಬದ್ಧವಾದ ವ್ಯವಹಾರದಲ್ಲಿ ನೀಡಬೇಕಿದ್ದ 4 ಲಕ್ಷ ರೂ.ಗಳಿಗೆ ಚೆಕ್‌ನ್ನು ನೀಡಿದ್ದು, ಅದು ಬ್ಯಾಂಕಿನಲ್ಲಿ ಬೌನ್ಸ್ ಆದ ಪರಿಣಾಮ ಆರೋಪಿಗೆ ನೋಟೀಸು ನೀಡಿದರೂ ಹಣ ಪಾವತಿಸದಿದ್ದಾಗ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ, ವಾದಗಳನ್ನು ಆಲಿಸಿ ಆರೋಪಿಗೆ ಚೆಕ್ ವೌಲ್ಯದ ಎರಡು ಪಟ್ಟು ಹಣ ಹಾಗೂ 5000ರೂ. ದಂಡ ಪಾವತಿಸಲು ಆದೇಶಿಸಿದ್ದು ಜೊತೆಗೆ ಆರು ತಿಂಗಳ ಸಾದಾ ಜೈಲು ವಾಸದ ತೀರ್ಪನ್ನು ನೀಡಿದ್ದರು ಎಂದು ಪಿರ್ಯಾದಿದಾರರ ಪರವಾಗಿ ವಾದಿಸಿದ ನ್ಯಾಯವಾದಿ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ತಿಳಿಸಿದ್ದಾರೆ.





