ಸಮರೆತಾ ಎಕ್ಸ್‌ಪ್ರೆಸ್ ಸಂಚಾರ ಎಂದಿನಂತಿರಲಿದೆ: ರೈಲ್ವೆ

ಹೊಸದಿಲ್ಲಿ,ಫೆ.27: ಪಾಕಿಸ್ತಾನವು ವಾಘಾದಿಂದ ಲಾಹೋರದವರೆಗೆ ರೈಲು ಸಂಚಾರಗಳನ್ನು ಸ್ಥಗಿತಗೊಳಿಸಿದೆ ಎಂಬ ವರದಿಗಳ ನಡುವೆಯೇ ಬುಧವಾರ ಭಾರತೀಯ ರೈಲ್ವೆಯು,ದಿಲ್ಲಿಯಿಂದ ಭಾರತದ ಅಟ್ಟಾರಿವರೆಗೆ ಸಮರೆತಾ ಎಕ್ಸ್‌ಪ್ರೆಸ್‌ನ ಸಂಚಾರ ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದೆ.
ಸದ್ಯ ರೈಲು ರೈಲು ತನ್ನ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ಉತ್ತರ ರೈಲ್ವೆಯ ವಕ್ತಾರ ದೀಪಕ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬುಧವಾರ ಮತ್ತು ರವಿವಾರಗಳಂದು ಸಂಚರಿಸುವ ರೈಲು ಇಂದು ರಾತ್ರಿ 11:10ಕ್ಕೆ ಹಳೆಯ ದಿಲ್ಲಿ ರೈಲ್ವೆ ನಿಲ್ದಾಣದಿಂದ 26 ಪ್ರಯಾಣಿಕರೊಡನೆ ತನ್ನ ಸಂಚಾರವನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿದವು. ಈ ರೈಲು ದಿಲ್ಲಿ ಮತ್ತು ಅಟ್ಟಾರಿ ನಿಲ್ದಾಣಗಳ ಮಧ್ಯೆ ಯಾವುದೇ ವಾಣಿಜ್ಯಿಕ ನಿಲುಗಡೆೆಗಳನ್ನು ಹೊಂದಿಲ್ಲ. ಆರಂಭದಲ್ಲಿ ಒಂದೇ ರೈಲು ದಿಲ್ಲಿ ಮತ್ತು ಲಾಹೋರಗಳ ಮಧ್ಯೆ ಸಂಚರಿಸುತ್ತಿತ್ತು. ಆದರೆ ಈಗ ಪಾಕಿಸ್ತಾನದ ರೈಲು ಅಟ್ಟಾರಿವರೆಗೆ ಮಾತ್ರ ಬರುತ್ತದೆ ಮತ್ತು ಪ್ರಯಾಣಿಕರು ಅಲ್ಲಿ ಭಾರತಕ್ಕೆ ಬರುವ ರೈಲನ್ನು ಹತ್ತಬೇಕಿದೆ.
ಆರು ಸ್ಲೀಪರ್ ಮತ್ತು ಒಂದು ಎಸಿ 3-ಟೈರ್ ಕೋಚ್‌ಗಳನ್ನು ಹೊಂದಿರುವ ಈ ರೈಲು ಸೇವೆಯನ್ನು 1976 ಜು.22ರಂದು ಶಿಮ್ಲಾ ಒಪ್ಪಂದದಡಿ ಆರಂಭಿಸಲಾಗಿತ್ತು.
ಲಾಹೋರನಿಂದ ಈ ರೈಲು ಪ್ರತಿ ಸೋಮವಾರ ಮತ್ತು ಗುರುವಾರ ಹೊರಡುತ್ತದೆ.
ಸಾಮಾನ್ಯವಾಗಿ ಶೇ.70ರಷ್ಟು ಆಸನಗಳು ಭರ್ತಿಯಾಗಿರುತ್ತಿದ್ದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಪುಲ್ವಾಮಾ ದಾಳಿಯ ಬಳಿಕ ತೀವ್ರವಾಗಿ ಕುಸಿದಿದೆ ಎಂದು ಮೂಲಗಳು ತಿಳಿಸಿದವು.





