ಆಸ್ಟ್ರೇಲಿಯಕ್ಕೆ ಟ್ವೆಂಟಿ-20 ಸರಣಿ: ಮ್ಯಾಕ್ಸ್‌ವೆಲ್ ಅಜೇಯ ಶತಕ

ಬೆಂಗಳೂರು,ಫೆ.27: ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆಕರ್ಷಕ ಶತಕದ ಬೆಂಬಲದಿಂದ ಆಸ್ಟ್ರೇಲಿಯ ತಂಡ ಭಾರತ ವಿರುದ್ಧದ 2ನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 7 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ.
ನಾಯಕ ವಿರಾಟ್ ಕೊಹ್ಲಿ (ಔಟಾಗದೆ 72 ರನ್, 38 ಎಸೆತ, 2 ಬೌಂಡರಿ, 6 ಸಿಕ್ಸರ್) ಅವರ ಆಕರ್ಷಕ ಅರ್ಧಶತಕದ ಕೊಡುಗೆ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯ ತಂಡದ ಗೆಲುವಿಗೆ 191 ರನ್ ಗುರಿ ನೀಡಿತು.
ಗೆಲ್ಲಲು ಕಠಿಣ ಸವಾಲು ಪಡೆದ ಆಸೀಸ್ ತಂಡ ಮ್ಯಾಕ್ಸ್‌ವೆಲ್ ಔಟಾಗದೆ ಗಳಿಸಿದ ಶತಕದ(113, 55 ಎಸೆತ, 7 ಬೌಂಡರಿ, 9 ಸಿಕ್ಸರ್) ಸಹಾಯದಿಂದ 19.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಈ ಗೆಲುವಿನ ಮೂಲಕ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.
ಇದಕ್ಕೂ ಮೊದಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಇನಿಂಗ್ಸ್ ಆರಂಭಿಸಿದ ‘ಲೋಕಲ್ ಹೀರೊ’ ಕೆಎಲ್ ರಾಹುಲ್(47) ಹಾಗೂ ಶಿಖರ್ ಧವನ್(14)ಮೊದಲ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಬೆಹ್ರನ್‌ಡಾರ್ಫ್ ಬೇರ್ಪಡಿಸಿದರು.
ಧವನ್(14) ಹಾಗೂ ರಿಷಭ್ ಪಂತ್(1) ಲಭಿಸಿದ ಅವಕಾಶ ಬಳಸಿಕೊಳ್ಳಲು ವಿಫಲರಾದರು.
ಆಗ ಜೊತೆಯಾದ ಕೊಹ್ಲಿ ಹಾಗೂ ಧೋನಿ(40,23 ಎಸೆತ, 3 ಬೌಂಡರಿ, 3 ಸಿಕ್ಸರ್) 4ನೇ ವಿಕೆಟ್‌ಗೆ ಬರೋಬ್ಬರಿ 100 ರನ್ ಸೇರಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಕೊಹ್ಲಿ (ಔಟಾಗದೆ 72 ರನ್) ಹಾಗೂ ದಿನೇಶ್ ಕಾರ್ತಿಕ್ ಔಟಾಗದೆ 8 ರನ್ ಗಳಿಸಿದರು.







