ಗಡಿ ನಿಯಂತ್ರಣ ರೇಖೆಯಲ್ಲಿ ಮುಂದುವರಿದ ದಾಳಿ: ಪಿಒಕೆಯ ನಾಲ್ವರು ನಾಗರಿಕರು ಸಾವು

ಹೊಸದಿಲ್ಲಿ, ಪೆ. 27: ಪಾಕ್ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಮೋರ್ಟಾರ್ ಹಾಗೂ ಸಣ್ಣ ಸಶ್ತಾಸ್ತ್ರಗಳನ್ನು ಬಳಸಿ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ರಾತ್ರಿ ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ ಪಾಕಿಸ್ತಾನದ ಐದು ಠಾಣೆಗಳನ್ನು ನಾಶಗೊಳಿಸಿದೆ. ಈ ದಾಳಿಯಲ್ಲಿ ಪಾಕ್ ಸೇನೆಯ ಹಲವು ಯೋಧರಿಗೆ ಗಾಯಗಳಾಗಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ ಪರಿಣಾಮಕಾರಿಯಾಗಿ ಪ್ರತಿ ದಾಳಿ ನಡೆಸಿತು. ನಮ್ಮ ದಾಳಿಯ ಪರಿಣಾಮ ಪಾಕಿಸ್ತಾನದ ಐದು ಠಾಣೆಗಳು ನಾಶವಾದವು. ಪಾಕ್ ಸೇನೆಯ ಹಲವು ಯೋಧರಿಗೆ ಗಾಯಗಳಾದವು ಎಂದು ರಕ್ಷಣಾ ಪಿಆರ್‌ಒ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಮಂಗಳವಾರ ಸಂಜೆ 6.30ರಿಂದ ಪಾಕಿಸ್ತಾನ ಸೇನೆ ಬಾರಿ ಮೋರ್ಟಾರ್ ಹಾಗೂ ಸಣ್ಣ ಶಸ್ತಾಸ್ತ್ರ ಬಳಸಿ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿತ್ತು.
ಗ್ರಾಮಸ್ಥರ ಮನೆಗಳಿಂದ ಹಾಗೂ ಗ್ರಾಮಸ್ಥರನ್ನು ಮಾನವ ಗುರಾಣಿಯಾಗಿ ಬಳಸಿಕೊಂಡು ಪಾಕ್ ಸೇನೆ ಮೋರ್ಟಾರ್ ಹಾಗೂ ಮಿಸೈಲ್ ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ನಾವು ಗುರಿಯಾಗಿರಿಸಿದ ಪಾಕಿಸ್ತಾನದ ಠಾಣೆಗಳು ನಾಗರಿಕ ಪ್ರದೇಶದಿಂದ ದೂರವಿವಿತ್ತು ಎಂದು ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಕ್ಕಳು ಸೇರಿದಂತೆ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.







