ಅರಣ್ಯವಾಸಿಗಳ ಎತ್ತಂಗಡಿ ಆದೇಶ: ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆ- ಸತೀಶ್ ಜಾರಕಿಹೊಳಿ

ಚಿಕ್ಕಮಗಳೂರು, ಫೆ.27: ಬುಡಕಟ್ಟು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು. ಈ ಸಂಬಂಧದ ಸಮಸ್ಯೆ ಪರಿಹಾರಕ್ಕೆ ನಿವೃತ್ತ ಅಧಿಕಾರಿಗಳ ತಂಡವನ್ನು ನೇಮಿಸಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಸತೀಶ್‍ಜಾರಕಿಹೊಳಿ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಅರಣ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯವಾಸಿಗಳ ಪೈಕಿ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿರುವ ಅರ್ಜಿಗಳು ತಿರಸ್ಕೃತಗೊಂಡವರನ್ನು ಒಕ್ಕಲೆಬ್ಬಿಸಲು ನ್ಯಾಯಾಲಯ ಸೂಚಿಸಿದೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿರುವವರನ್ನೂ ಇದರ ವ್ಯಾಪ್ತಿಗೆ ಸೇರಿಸಲಾಗಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳಲು ನಿವೃತ್ತ ಅಧಿಕಾರಿಗಳ ತಂಡ ನೇಮಿಸಲಾಗುವುದು ಎಂದ ಅವರು, ಅರಣ್ಯವಾಸಿಗಳ ಪೈಕಿ ಇತರ ಸಮುದಾಯದವರು 75 ವರ್ಷಗಳ ದಾಖಲೆ ಸಲ್ಲಿಸಿದ್ದರೆ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯಡಿ ಜಾಗ ಮಂಜೂರಾಗಲಿದೆ. ತಿರಸ್ಕೃತ ಅರ್ಜಿಗಳನ್ನು ಮರುಪರಿಶೀಲನೆ ಮಾಡಲಾಗುವುದು ಎಂದರು.
ಇತ್ತೀಚೆಗೆ ಬಂಡಿಪುರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ದುಷ್ಕರ್ಮಿಗಳ ದುಷ್ಕೃತ್ಯವಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದ ಅವರು, ಬೇಸಿಗೆ ದಿನಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಉಂಟಾಗುವ ಬೆಂಕಿ ಅವಘಡ ತಪ್ಪಿಸಲು ಬಾಡಿಗೆ ಆಧಾರದಲ್ಲಿ ಹೆಲಿಕಾಪ್ಟರ್ ಗಳನ್ನು ಪಡೆದು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಬೆಂಕಿ ನಂದಿಸುವ ಸುಧಾರಿತ ಸಲಕರಣೆಗಳು, ಅರಣ್ಯ ರಕ್ಷಣೆಗೆ ಅಗತ್ಯವಿರುವ ಆಯುಧಗಳು, ವಾಹನಗಳ ಖರೀದಿ ಪ್ರಕ್ರಿಯೆಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.
ಕಂದಾಯ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಶೀಘ್ರದಲ್ಲಿಯೇ ಪರಿಹರಿಸುವಂತೆ ಸೂಚಿಸಲಾಗುವುದು ಎಂದ ಅವರು 94ಸಿ ಅಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಪ್ರಕರಣಗಳನ್ನು ತುರ್ತಾಗಿ ಪರಿಹರಿಸಲಾಗುವುದು. ಮಲೆನಾಡು ಭಾಗದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಾಣ ಮಾಡಲು ಈ ಬಾರಿಯ ಬಜೆಟ್‍ನಲ್ಲಿ 100 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 600 ಕಿಮೀ ತಡೆಗೋಡೆ ನಿರ್ಮಾಣ ಮಾಡಲು ಪ್ರಸ್ತಾವ ಇದೆ. ಈ ಹಣದಲ್ಲಿ ಆದ್ಯತೆ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 10 ಎಕರೆ ಒಳಗಿನ ಒತ್ತುವರಿ ಪ್ರದೇಶ ಲೀಸ್‍ಗೆ ನೀಡುವುದಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದರು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಲೀಸ್‍ಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಸುತ್ತಿರುವ ಸಿಬ್ಬಂದಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸಿಬ್ಬಂದಿ ಬ್ಯಾಂಕ್ ಖಾತೆಗೆ ವೇತಜನ ಜಾಮಾ ಆಗುವಂತೆ ಕ್ರಮವಹಿಸಲಾಗುವುದು.
- ಸತೀಶ್ ಜಾರಕಿಹೊಳಿ







