ಬ್ಯಾರೀಸ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ
ಪುಲ್ವಾಮ ದಾಳಿಯ ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ

ಮಂಗಳೂರು, ಫೆ 27 : ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ದಾಂಜಲಿ ಅರ್ಪಿಸಲು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನೋಳಿ ಇದರ ಎನ್ ಎಸ್ ಎಸ್ ಘಟಕ ಮತ್ತು ಪ್ರೇ ಕ್ಲಬ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಬ್ಯಾರೀಸ್ ನಾಲೇಜ್ ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರವು ನಡೆಯಿತು.
ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದ ಒಟ್ಟು 159 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ಪ್ರೊ. ಡಾ.ಮುಸ್ತಫಾ ಬಸ್ತಿಕೋಡಿ ಸ್ವಾಗತಿಸಿ, ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ. ಪಿ ಮಹಾಬಲೇಶ್ವರಪ್ಪ "ರಕ್ತವು ಅಮೂಲ್ಯವಾದ ಉಡುಗೊರೆಯಾಗಿದ್ದು, ಯಾರಾದರೂ ಇನ್ನೊಬ್ಬರಿಗೆ ನೀಡುವ ಜೀವದಾನವೆಂಬ ಉಡುಗೊರೆಯಾಗಿದೆ. ರಕ್ತದಾನ ಮಾಡುವ ನಿಮ್ಮ ನಿರ್ಧಾರವು ಇನ್ನೊಬ್ಬರ ಜೀವವನ್ನು ಉಳಿಸ ಬಹುದು. ಹುತಾತ್ಮರಾದ ವೀರ ಸೈನಿಕರ ಮಕ್ಕಳ ಇಂಜಿನಿಯರ್ ಮತ್ತು ಆರ್ಕಿಟೆಕ್ಚರ್ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ಆರ್ಥಿಕ ಸಹಾಯವನ್ನು ಬ್ಯಾರೀಸ್ ಅಕಾಡೆಮಿ ಒಫ್ ಲರ್ನಿಂಗ್ ಭರಿಸಲಿದೆ ಎಂದು ಆಡಳಿತ ವರ್ಗದ ಪರವಾಗಿ ಘೋಷಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹೋಪ್ ಫೌಂಡೇಶನ್ ಇದರ ಸ್ಥಾಪಕರೂ ಹಾಗೂ ನಿರ್ವಹಣಾ ತರಬೇತುದಾರ ಸೈಫ್ ಸುಲ್ತಾನ್ ಸೈಯದ್ ಮಾತನಾಡುತ್ತಾ,"ರಕ್ತದಾನವು ಜೀವ ಉಳಿಸಲು ಸಹಾಯ ಮಾಡುವ ಪ್ರಮುಖ ಮಾರ್ಗವಾಗಿದೆ. ಜೀವ ಉಳಿಸುವುದರೊಂದಿಗೆ ರಕ್ತದಾನದ ಪ್ರಾಮುಖ್ಯತೆಗೆ ಇನ್ನೂ ಹಲವಾರು ಕಾರಣಗಳಿವೆ. ಒಂದು ದಾನವು ಮೂರು ಜೀವವನ್ನು ಉಳಿಸಬಹುದು. ವೈದ್ಯಕೀಯ ತಂತ್ರಜ್ಞಾನಗಳ ಬೆಳವಣಿಗೆಗಳ ಹೊರತಾಗಿಯೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಅಗತ್ಯವಿರುವವರಿಗೆ ರಕ್ತ ದಾನವೊಂದೇ ಮಾರ್ಗವಿರುವುದು. ಎಲ್ಲಾ ಜಾತಿ ಧರ್ಮಗಳು ಜೀವ ಉಳಿಸಲು ಪ್ರಾಮುಖ್ಯತೆಯನ್ನು ನೀಡಿದೆ. ಆದ್ದರಿಂದ ರಕ್ತದಾನ ಶಿಬಿರವನ್ನು ಅಧಿಕಗೊಳಿಸಬೇಕು" ಎಂದು ಹೇಳಿದರು.
ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಪ್ರಾಂಶುಪಾಲರಾದ ಅಶೋಕ್ ಎಲ್ ಪಿ ಮೆಂಡೋನ್ಸಾ ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಹುರಿದುಂಬಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು ಹಾಗೂ ಸಮಾಜ ಸೇವೆಗೆ ಸಹಕಾರ ನೀಡುತ್ತಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ಪ್ರೇ ಕ್ಲಬ್ ಇದರ ಸಂಯೋಜಕ, ಪ್ರೊ. ಅಬ್ದುಲ್ ಜಬ್ಬಾರ್, ಎನ್ ಎಸ್ ಎಸ್ ಘಟಕದ ಸಂಯೋಜಕ, ಪ್ರೊ. ನಿತಿನ್ ಸಾಲಿಯಾನ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸ್ಥಾಪಕ ನಿಸಾರ್ ಉಳ್ಳಾಲ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಮತ್ತು ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು, ಸಿಬಂದಿ ವರ್ಗ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಿಎಸ್ಇ ತೃತೀಯ ವರ್ಷದ ವಿದ್ಯಾರ್ಥಿನಿ ಮದೀಹ ನೌಶೀನ್ ಕಾರ್ಯಕ್ರಮ ನಿರೂಪಿಸಿದರು, ಖಾಲಿದ್ ವಂದಿಸಿದರು.



















