ಸಿಎ, ಸಿಎಸ್ -ಸಿಎಂಎ ಫೌಂಡೇಶನ್ ಉದ್ಘಾಟನೆ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಭಟ್ಕಳ , ಫೆ. 27: ಭಟ್ಕಳ ಎಜ್ಯಕೇಶನ್ ಟ್ರಸ್ಟ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದೆ. ಶಿಕ್ಷಣ ಪ್ರತಿಯೊಬ್ಬರಿಗೂ ಒಂದು ಶಕ್ತಿಯಾಗಿದ್ದು, ಶಿಕ್ಷಣದಿಂದ ಮಾತ್ರ ಪ್ರತಿಯೊಬ್ಬರೂ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಭಟ್ಕಳ ಎಜ್ಯಕೇಶನ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಆರ್.ಜಿ.ಕೊಲ್ಲೆ ಹೇಳಿದರು.
ಅವರು ಸೋಮವಾರ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ನೂತನವಾಗಿ ಆರಂಭಿಸಲಾದ ಸಿಎ, ಸಿಎಸ್ ಮತ್ತು ಸಿಎಂಎ ಫೌಂಡೇಶನ್ ತರಗತಿ ಹಾಗೂ ಗಜಾನನ ಗಣಪತಿ ಕೊಲ್ಲೆರಾಯ್ಕರ್ ಮೆಮೋರಿಯಲ್ ಫಂಡ್ ಪ್ರಾಯೋಜಿತ ದೈವಜ್ಞ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ ಎನ್ನುವುದು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮಾಜದ ಬಡವರಿಗೂ ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಭಟ್ಕಳ ಎಜ್ಯಕೇಶನ್ ಟ್ರಸ್ಟಿನ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತ ಬಂದಿದ್ದೇವೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಸುರೇಶ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಹುಲ್ ರಘುವೀರ್‍ಕೊಲ್ಲೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಮುಖರಾದರಾಜೇಶ ನಾಯಕ್, ಗಜಾನನ ಗಣಪತಿ ಕೊಲ್ಲೆರಾಯ್ಕರ್ ಮೆಮೋರಿಯಲ್ ಫಂಡ್ ಸಂಸ್ಥೆಯ ಸದಸ್ಯ ಅಕ್ಷಯ್ ಕೊಲ್ಲೆ ಉಪಸ್ಥಿತರಿದ್ದರು. ಶ್ರೀ ಗುರುಸುಧೀಂದ್ರ ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಶ್ಯಾನಭಾಗ ಸ್ವಾಗತಿಸಿದರು. ಧನ ಲಕ್ಷ್ಮೀಕಾರ್ಯಕ್ರಮ ನಿರೂಪಿಸಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿಭೆಗಳಾದ ರಾಹುಲ್ ಕೊಲ್ಲೆ ಹಾಗೂ ಬಿಸಿಸಿಐ ಮಾನ್ಯತೆ ಪಡೆದಿರುವ ಕ್ರಿಕೆಟ್ ಅಂಪೈರ್ ಕೇಶವ ಸುಬ್ರಾಯ ಕೊಲ್ಲೆರವರನ್ನು ಸನ್ಮಾನಿಸಿ ಗೌರವಿಸಲಾಯಿತು.







