ಸರ್ಜಿಕಲ್ ದಾಳಿಯ ಸಮಯದಲ್ಲೇ ಹುಟ್ಟಿದ ಮಗುವಿಗೆ ‘ಮಿರಾಜ್’ ಎಂದು ಹೆಸರಿಟ್ಟ ದಂಪತಿ

ಅಜ್ಮೇರ್, ಫೆ.27: ಮಂಗಳವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ ಮಿರಾಜ್ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ಕೆಲವೇ ಗಂಟೆಯ ಬಳಿಕ ರಾಜಸ್ತಾನದಲ್ಲಿ ಹುಟ್ಟಿದ ಮಗುವೊಂದಕ್ಕೆ ಮಿರಾಜ್ ರಾಥೋರ್ ಎಂದು ನಾಮಕರಣಗೊಳಿಸಲಾಗಿದೆ.
ಮಗುವನ್ನು ಮಿರಾಜ್ ರಾಥೋರ್ ಎಂಬ ಹೆಸರಿನಲ್ಲಿ ಕರೆಯುವುದರಿಂದ ಭಾರತೀಯ ವಾಯುಪಡೆಯ ಸಾಹಸಗಾಥೆ ಮತ್ತು ಮಿರಾಜ್ ಜೆಟ್ ವಿಮಾನಗಳ ಸಾಧನೆ ಸದಾ ತಮ್ಮ ಮನದಲ್ಲಿ ಹಸಿರಾಗಿರುತ್ತದೆ ಎಂದು ದಂಪತಿ ತಿಳಿಸಿದ್ದಾರೆ. ಮಗು ದೊಡ್ಡವನಾದ ಬಳಿಕ ಭದ್ರತಾ ಪಡೆಗಳಿಗೆ ಸೇರುತ್ತಾನೆ ಎಂದು ಈ ದಂಪತಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಮಿರಾಜ್ 2000 ಯುದ್ಧವಿಮಾನಗಳನ್ನು ಭಾರತದ ವಾಯುಪಡೆಗೆ 1985ರಲ್ಲಿ ನಿಯೋಜಿಸಲಾಗಿತ್ತು. ಬಹು ಆಯಾಮದ ಯುದ್ಧವಿಮಾನವಾಗಿರುವ ಮಿರಾಜ್ 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ನಿರ್ಣಾಯಕ ಪಾತ್ರ ವಹಿಸಿತ್ತು. ಅತ್ಯಂತ ಕಠಿಣ ಸಂದರ್ಭ ಮತ್ತು ಪರಿಸ್ಥಿತಿಯಲ್ಲೂ ಉಗ್ರರ ನೆಲೆಯ ಮೇಲೆ ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಕರಾರುವಕ್ಕಾಗಿ ಹಾಕಿರುವ ಮಿರಾಜ್ ಯುದ್ಧವಿಮಾನ ವಾಯುಪಡೆಯ ಅತ್ಯಂತ ಪ್ರಮುಖ ಅಸ್ತ್ರವಾಗಿದೆ.





