ಸೌರವ್ ಘೋಷಾಲ್ ಎಂಟರ ಘಟ್ಟಕ್ಕೆ
ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್

ಚಿಕಾಗೊ, ಫೆ.27: ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ವೇಲ್ಸ್ ಆಟಗಾರ ಜೋಯಲ್ ಮಾಕಿನ್ ಅವರನ್ನು ಸದೆಬಡಿದ ಭಾರತದ ಸೌರವ್ ಘೋಷಾಲ್ ಪಿಎಸ್‌ಎ ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ 32 ವರ್ಷದ, 11ನೇ ಶ್ರೇಯಾಂಕದ ಆಟಗಾರ ಸೌರವ್ 11-13, 11-7, 11-7, 13-11 ಗೇಮ್‌ಗಳ ಹೋರಾಟಕಾರಿ ಪಂದ್ಯದಲ್ಲಿ ಶ್ರೇಯಾಂಕರಹಿತ ಆಟಗಾರನಿಗೆ ಸೋಲುಣಿಸಿದರು. 2017ರಲ್ಲಿ ಮುಂಬೈನಲ್ಲಿ ನಡೆದ ಸಿಸಿಐ ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ ಸೌರವ್‌ಗೆ ಎದುರಾಗಿದ್ದ ಮಾಕಿನ್, ಈ ಪಂದ್ಯದಲ್ಲಿ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು.
ಮೊದಲ ಗೇಮ್‌ನ್ನು ಗೆದ್ದು ಭಾರತದ ಆಟಗಾರನ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮಾಕಿನ್‌ಗೆ ಆ ಬಳಿಕ ಸೌರವ್ ಬಿರುಸಿನ ಆಟವಾಡಿ ಎರಡು ಗೇಮ್‌ಗಳನ್ನು ಗೆದ್ದು ತಿರುಗೇಟು ನೀಡಿದರು. ನಾಲ್ಕನೇ ಗೇಮ್‌ನಲ್ಲಿ ಮತ್ತೆ ಮಿಂಚಿದ ಮಾಕಿನ್ ಒಂದು ಹಂತದಲ್ಲಿ 8-5ರಿಂದ ಮುಂದಿದ್ದರು.
ಆದರೆ ತಮ್ಮ ಎಲ್ಲ ಅನುಭವವನ್ನು ಓರೆಗೆ ಹಚ್ಚಿದ ಸೌರವ್ ಗೇಮ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಜಯವನ್ನೂ ಸಂಪಾದಿಸಿದರು. 2013ರಲ್ಲಿ ಈ ಟೂರ್ನಿಯಲ್ಲಿ ಸೌರವ್ ಎಂಟರಘಟ್ಟಕ್ಕೆ ಪ್ರವೇಶಿಸಿದ್ದರು. ಈಗ ಎರಡನೇ ಬಾರಿ ಅವರು ಈ ಸಾಧನೆ ಮಾಡಿದ್ದಾರೆ.
ತಮ್ಮ ಮುಂದಿನ ಪಂದ್ಯದಲ್ಲಿ ಸೌರವ್ ಅವರು ಜರ್ಮನಿಯ ಸೈಮನ್ ರೋಸ್ನರ್ ಅವರ ಸವಾಲನ್ನು ಎದುರಿಸಲಿದ್ದಾರೆ.







