ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕದ ಅಜೇಯ ಗೆಲುವಿನ ಓಟ ಅಬಾಧಿತ
ಕಟಕ್,ಫೆ.27: ಮಾಜಿ ನಾಯಕ ವಿನಯಕುಮಾರ್ ಅವರ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಕರ್ನಾಟಕ ತಂಡ ಛತ್ತೀಸ್‌ಗಡ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ‘ಡಿ’ ಗುಂಪಿನ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಸತತ 5ನೇ ಗೆಲುವು ಸಾಧಿಸಿ ಅಜೇಯ ಓಟ ಮುಂದುವರಿಸಿದೆ.
ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಛತ್ತೀಸ್‌ಗಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು. ಗೆಲ್ಲಲು ಸವಾಲಿನ ಮೊತ್ತ ಪಡೆದ ಕರ್ನಾಟಕ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿನಯಕುಮಾರ್ 13 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಿತ ಔಟಾಗದೆ 34 ರನ್ ಗಳಿಸಿ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು. ಕರ್ನಾಟಕದ ಪರ ಕರುಣ್ ನಾಯರ್ ಸರ್ವಾಧಿಕ 35 ರನ್ ಗಳಿಸಿದರೆ, ಜೆ.ಸುಚಿತ್(34), ಮಾಯಾಂಕ್ ಅಗರ್ವಾಲ್(21), ಎಂ.ಮಿಥುನ್(ಔಟಾಗದೆ 18), ರಾಹುಲ್ ಕದಂ(16)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಮನೀಷ್ ಪಾಂಡೆ ಕೇವಲ 9 ರನ್ ಗಳಿಸಿದರು.
ಛತ್ತೀಸ್‌ಗಡದ ಪರ ವೌರ್ಯ(2-13), ಶುಭಂ ಸಿಂಗ್(2-35) ಹಾಗೂ ಕುಶ್ವಾಹ (2-40)ತಲಾ ಎರಡು ವಿಕೆಟ್ ಪಡೆದಿದ್ದಾರೆ.
►ಛತ್ತೀಸ್‌ಗಡ 171/3: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಛತ್ತೀಸ್‌ಗಡ ತಂಡ ನಾಯಕ ಹರ್‌ಪ್ರೀತ್ ಸಿಂಗ್(79, 56 ಎಸೆತ, 8 ಬೌಂಡರಿ, 3 ಸಿಕ್ಸರ್) ಅರ್ಧಶತಕದ ಕೊಡುಗೆ, ಎ.ಕೆ . ಖಾರೆ(ಔಟಾಗದೆ 45), ಆರಂಭಿಕ ಆಟಗಾರ ರಿಷಭ್ ತಿವಾರಿ(33)ಅಮೂಲ್ಯ ಕಾಣಿಕೆ ಸಹಾಯದಿಂದ 3 ವಿಕೆಟ್‌ಗೆ 171 ರನ್ ಗಳಿಸಿತು. ಕರ್ನಾಟಕದ ಪರ ಎಸ್.ಗೋಪಾಲ್(1-19),ಕೌಶಿಕ್(3-36) ಹಾಗೂ ಮಿಥುನ್(1-46) ತಲಾ ಒಂದು ವಿಕೆಟ್ ಪಡೆದರು.
ಸಹಾ ಶತಕ: ಬಂಗಾಳಕ್ಕೆ ಭರ್ಜರಿ ಜಯ
ಕಟಕ್,ಫೆ.27: ಭುಜನೋವಿನಿಂದ ಚೇತರಿಸಿಕೊಂಡು ಸಕ್ರಿಯ ಕ್ರಿಕೆಟಿಗೆ ವಾಪಸಾಗಿರುವ ವಿಕೆಟ್‌ಕೀಪರ್-ದಾಂಡಿಗ ವೃದ್ಧಿಮಾನ್ ಸಹಾ ಶತಕದ(129,62 ಎಸೆತ)ಬೆಂಬಲದಿಂದ ಬಂಗಾಳ ತಂಡ ಅರುಣಾಚಲ ಪ್ರದೇಶ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಗ್ರೂಪ್ ಪಂದ್ಯವನ್ನು 107 ರನ್‌ಗಳಿಂದ ಗೆದ್ದುಕೊಂಡಿದೆ.
ಸಹಾ ಶತಕದ ನೆರವಿನಿಂದ ಬಂಗಾಳ 6 ವಿಕೆಟ್‌ಗೆ 234 ರನ್ ಗಳಿಸಿದರೆ, ಅರುಣಾಚಲ 4 ವಿಕೆಟ್‌ಗೆ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಸಹಾ ಟಿ-20 ಕ್ರಿಕೆಟ್‌ನಲ್ಲಿ 2ನೇ ಬಾರಿ ಶತಕ ಸಿಡಿಸಿದರು. 2014ರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಶತಕ ಸಿಡಿಸಿದ್ದರು. ಇಂದು ಬಂಗಾಳದ ಪರ ಇನಿಂಗ್ಸ್ ಆರಂಭಿಸಿದ ಸಹಾ 62 ಎಸೆತಗಳನ್ನು ಎದುರಿಸಿ 16 ಬೌಂಡರಿ, 4 ಸಿಕ್ಸರ್‌ಗಳನ್ನು ಸಿಡಿಸಿದರು.
►ಮುಗ್ಗರಿಸಿದ ಮುಂಬೈ
ಸ್ಟಾರ್ ಆಟಗಾರರನ್ನು ಒಳಗೊಂಡ ಮುಂಬೈ ತಂಡ ರೈಲ್ವೇಸ್ ವಿರುದ್ಧ ಪಂದ್ಯವನ್ನು 57 ರನ್‌ಗಳಿಂದ ಸೋತಿದೆ. ಗೆಲ್ಲಲು 176 ರನ್ ಬೆನ್ನಟ್ಟಿದ ಮುಂಬೈ ತಂಡದ ಅಗ್ರ ಮೂವರು ಆಟಗಾರರಾದ ಪೃಥ್ವಿ ಶಾ, ಅಜಿಂಕ್ಯ ರಹಾನೆ ಹಾಗೂ ಶ್ರೇಯಸ್ ಅಯ್ಯರ್ 5 ಓವರ್‌ನೊಳಗೆ ವಿಕೆಟ್ ಒಪ್ಪಿಸಿದರು. 18.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ಮುಂಬೈ ಪರ ಸೂರ್ಯಕುಮಾರ ಯಾದವ್ ಅಗ್ರ ಸ್ಕೋರರ್(38) ಎನಿಸಿಕೊಂಡರು. ವೇಗದ ಬೌಲರ್ ಆಶೀಷ್ ಯಾದವ್ 4 ವಿಕೆಟ್‌ಗಳನ್ನು ಉರುಳಿಸಿದರು. ಮುಂಬೈ ಟೂರ್ನಿಯಲ್ಲಿ ಆಡಿದ 5ನೇ ಪಂದ್ಯದಲ್ಲಿ ಮೊದಲ ಸೋಲು ಕಂಡಿದೆ.







